ನವದೆಹಲಿ, ಜನವರಿ 15: ಕಳೆದ ವರ್ಷದೊಂದಿಗೆ ಹೋಲಿಸಿದರೆ 2025ರಲ್ಲಿ ಚೀನಾಗೆ ಭಾರತದ ರಫ್ತು ಗಮನಾರ್ಹವಾಗಿ ಹೆಚ್ಚಳ ಕಂಡಿದೆ. 2024ರಲ್ಲಿ ಚೀನಾಗೆ 14.25 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದ ಭಾರತ, 2025ರಲ್ಲಿ ಈ ಮೊತ್ತವನ್ನು 19.75 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದೆ. ಇದರಿಂದಾಗಿ ಭಾರತದ ರಫ್ತು 5.5 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಶೇ. 8.7ರಷ್ಟು ವೃದ್ಧಿ ದಾಖಲಾಗಿದೆ.
ಆದರೆ, ಭಾರತದ ರಫ್ತು ಏರಿಕೆಗೆ ಹೋಲಿಸಿದರೆ ಚೀನಾ ಭಾರತಕ್ಕೆ ಮಾಡಿದ ರಫ್ತು ಇನ್ನಷ್ಟು ವೇಗವಾಗಿ ಹೆಚ್ಚಾಗಿದೆ. 2024ರಲ್ಲಿ ಭಾರತಕ್ಕೆ 113.45 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದ ಚೀನಾ, 2025ರಲ್ಲಿ ಈ ಮೊತ್ತವನ್ನು 135.87 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದ್ದು, ಶೇ. 12.8ರಷ್ಟು ಏರಿಕೆ ಕಂಡಿದೆ.
ಇದರಿಂದಾಗಿ 2025ರಲ್ಲಿ ಭಾರತ–ಚೀನಾ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರ 155.62 ಬಿಲಿಯನ್ ಡಾಲರ್‌ಗೆ ತಲುಪಿದ್ದು, ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಆದರೆ ಚೀನಾದ ರಫ್ತು ಪ್ರಮಾಣ ಹೆಚ್ಚಿರುವುದರಿಂದ ಭಾರತದ ಟ್ರೇಡ್ ಡೆಫಿಸಿಟ್ ಮತ್ತಷ್ಟು ಗಂಭೀರಗೊಂಡಿದ್ದು, ಅದು 116.12 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದು ಭಾರತ ಎದುರಿಸುತ್ತಿರುವ ಅತಿದೊಡ್ಡ ವ್ಯಾಪಾರ ಕೊರತೆಯಾಗಿದೆ.
ಸಕಾರಾತ್ಮಕ ಅಂಶವೆಂದರೆ, ಚೀನಾದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಪ್ರವೇಶ ಹೆಚ್ಚಾಗುತ್ತಿದೆ. ಟೆಲಿಕಾಂ ಉಪಕರಣಗಳು, ಮಸಾಲೆ ಪದಾರ್ಥಗಳು, ಮೀನು ಮತ್ತು ಸಮುದ್ರ ಆಹಾರ ಉತ್ಪನ್ನಗಳ ರಫ್ತು ಚೀನಾಗೆ ಹೆಚ್ಚಾಗಿದೆ. ಜೊತೆಗೆ, ಚೀನಾದ ಐಟಿ, ಫಾರ್ಮಾ ಹಾಗೂ ಕೃಷಿ ಕ್ಷೇತ್ರಗಳ ಮಾರುಕಟ್ಟೆಗಳ ಮೇಲೂ ಭಾರತ ಹೆಚ್ಚಿನ ಗಮನ ಹರಿಸುತ್ತಿದೆ.
ಇದೇ ವೇಳೆ, ಚೀನಾದ ಒಟ್ಟಾರೆ ವಿದೇಶಿ ವ್ಯಾಪಾರವೂ 2025ರಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. 2025ರಲ್ಲಿ ಚೀನಾದ ರಫ್ತು 3.77 ಟ್ರಿಲಿಯನ್ ಡಾಲರ್ ಇದ್ದರೆ, ಆಮದು 2.58 ಟ್ರಿಲಿಯನ್ ಡಾಲರ್ ಆಗಿದೆ. ಇದರಿಂದ ಚೀನಾಗೆ ದಾಖಲೆಯ 1.2 ಟ್ರಿಲಿಯನ್ ಡಾಲರ್ ಟ್ರೇಡ್ ಸರ್‌ಪ್ಲಸ್ ಲಭಿಸಿದೆ. ಅಮೆರಿಕದ ಟ್ಯಾರಿಫ್ ಒತ್ತಡಗಳ ನಡುವೆಯೂ ಚೀನಾದ ವ್ಯಾಪಾರ ವೃದ್ಧಿಯಾಗಿರುವುದು, ಹಲವು ಕ್ಷೇತ್ರಗಳಲ್ಲಿ ಅದರ ರಫ್ತು ಉದ್ಯಮಗಳು ಬಲವಾಗಿ ನೆಲೆಯೂರಿರುವುದಕ್ಕೆ ಸಾಕ್ಷಿಯಾಗಿದೆ.

