ನವದೆಹಲಿ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಗುಜರಾತ್ನಲ್ಲಿ ಸ್ಪೇಸ್ ಸೆಂಟರ್ ನಿರ್ಮಿಸುತ್ತಿದೆ. ಇದು ಇಸ್ರೋದ ಮೂರನೇ ಬಾಹ್ಯಾಕಾಶ ಕೇಂದ್ರ ಎನಿಸಲಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಬಿಟ್ಟರೆ ಗುಜರಾತ್ನದ್ದು ಇಸ್ರೋದ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಎನಿಸಲಿದೆ. 10,000 ಕೋಟಿ ರೂ ವೆಚ್ಚದಲ್ಲಿ ಸ್ಪೇಸ್ ಸೆಂಟರ್ ನಿರ್ಮಾಣವಾಗಲಿದೆ.
ವರದಿಗಳ ಪ್ರಕಾರ, ಗುಜರಾತ್ನ ಡಿಯು ಮತ್ತು ವೇರಾವಲ್ ನಡುವೆ ಈ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ಎಸ್ಎಎಲ್ವಿ ಮತ್ತು ಪಿಎಸ್ಎಲ್ವಿ ರಾಕೆಟ್ಗಳನ್ನು ಉಡಾವಣೆ ಮಾಡುವ ಉದ್ದೇಶ ಇದೆ. ಕಮ್ಯುನಿಕೇಶನ್, ನ್ಯಾವಿಗೇಶನ್ ಮತ್ತು ರಿಮೋಟ್ ಸೆನ್ಸಿಂಗ್ ಸಿಸ್ಟಂಗಳ ಸೆಟಿಲೈಟ್ಗಳನ್ನು ಇಲ್ಲಿಂದಲೇ ನಭಕ್ಕೆ ಹಾರಿಸಲು ಆದ್ಯತೆ ಸಿಗಬಹುದು.
ಈಕ್ವಟರ್ ರೇಖೆಗೆ ಗುಜರಾತ್ ಸಮೀಪ ಇರುವುದರಿಂದ ಸೆಟಿಲೈಟ್ಗಳನ್ನು ಭೂಕಕ್ಷೆಗೆ ಸೇರಿಸಲು ಇಲ್ಲಿಂದಲೇ ಉಡಾವಣೆ ಮಾಡಲು ಉತ್ತಮ ಸ್ಥಳ ಆಯ್ಕೆ ಆಗಿರುತ್ತದೆ.
ಭಾರತದಲ್ಲಿ ಈಗಾಗಲೇ ಎರಡು ಸ್ಪೇಸ್ ಸೆಂಟರ್ಗಳಿವೆ. ಒಂದು ಆಂದ್ರದಲ್ಲಿ ಇದ್ದರೆ, ಇನ್ನೊಂದು ಕೇರಳದಲ್ಲಿದೆ. ಆಂಧ್ರದ ಶ್ರೀಹರಿಕೋಟಾ ದ್ವೀಪದಲ್ಲಿ ಸತೀಶ್ ಧವನ್ ಸ್ಪೇಸ್ ಸೆಂಟರ್ ಇದೆ. ಇದು ಇಸ್ರೋದ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ. ಇಸ್ರೋದ ಬಹುತೇಕ ಉಡಾವಣೆಗಳು ಸದ್ಯ ಇಲ್ಲಿಂದಲೇ ಆಗುತ್ತಿರುವುದು.
ಇನ್ನೊಂದು ಬಾಹ್ಯಾಕಾಶ ಕೇಂದ್ರವು ತಿರುವನಂತಪುರಂನ ತುಂಬಾ ಎಂಬಲ್ಲಿದೆ. ವೈಜ್ಞಾನಿಕ ಸಂಶೋಧನೆ ಉದ್ದೇಶಕ್ಕೆ ಬಳಸಲಾಗುವ ರಾಕೆಟ್ಗಳನ್ನು ಇಲ್ಲಿಂದ ಉಡಾವಣೆ ಮಾಡಲಾಗುತ್ತಿದೆ.

