ಚೆನ್ನೈ: ತಮಿಳು ಚಿತ್ರರಂಗದ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ, ಸೆನ್ಸಾರ್ ಸಂಬಂಧಿತ ಗೊಂದಲಗಳಿಂದಾಗಿ ಚಿತ್ರದ ರಿಲೀಸ್ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
‘ಜನ ನಾಯಗನ್’ ಚಿತ್ರವನ್ನು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕೆವಿಎನ್ ನಿರ್ಮಾಣ ಸಂಸ್ಥೆ ಡಿಸೆಂಬರ್ 18ರಂದು ಮಂಡಳಿಗೆ ಸಲ್ಲಿಸಿತ್ತು. ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ 27 ಸ್ಥಳಗಳಲ್ಲಿ ಕಟ್ ಅಥವಾ ಬದಲಾವಣೆ ಮಾಡಲು ಸೂಚನೆ ನೀಡಿತ್ತು. ಮಂಡಳಿಯ ಸೂಚನೆಯಂತೆ ಅಗತ್ಯ ತಿದ್ದುಪಡಿ ಮಾಡಿದ ಬಳಿಕ ಚಿತ್ರವನ್ನು ಮರು ಸಲ್ಲಿಸಲಾಗಿತ್ತು. ಆದರೆ, ಈ ಬಾರಿ ಕೂಡ ಮಂಡಳಿ ಒಪ್ಪಿಗೆ ನೀಡದೆ, ವಿಶೇಷ ಮಂಡಳಿಯಿಂದ ವೀಕ್ಷಣೆ ನಡೆಸುವಂತೆ ಶಿಫಾರಸು ಮಾಡಿತ್ತು.
ಇದೇ ವೇಳೆ, ಸೆನ್ಸಾರ್ ಮಂಡಳಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಚಿತ್ರತಂಡ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆವಿಎನ್ ನಿರ್ಮಾಣ ಸಂಸ್ಥೆ ಸೆನ್ಸಾರ್ ವಿವಾದ ಸಂಬಂಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಚಿತ್ರತಂಡ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಜನವರಿ 9ರಂದು ಆದೇಶ ಹೊರಬೀಳುವ ಸಾಧ್ಯತೆ ಇದೆ. ಸೆನ್ಸಾರ್ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ‘ಜನ ನಾಯಗನ್’ ಚಿತ್ರದ ರಿಲೀಸ್‌ನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕೆವಿಎನ್ ಸಂಸ್ಥೆ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ.
ಒಂದು ವೇಳೆ ಎಲ್ಲಾ ಅಡೆತಡೆಗಳು ನಿವಾರಣೆಯಾದರೆ, ಜನವರಿ 14ರಂದು ‘ಜನ ನಾಯಗನ್’ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

