ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣಬಡಿದಾಟ ಜೋರಾಗಿದೆ. ಇದರ ಮಧ್ಯೆ ಕೇಸರಿ ಮನೆಯಲ್ಲಿ ಮತ್ತೊಂದು ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಶ್ರೀರಾಮುಲು ಆಕ್ರೋಶಗೊಂಡಿದ್ದು, ಬಿಜೆಪಿ ತೊರೆಯುವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗಣಿಧಣಿ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ. ಪಕ್ಷ ಬಿಡೋದು ಅವರ ವೈಯಕ್ತಿಕ ವಿಚಾರ. ಹೋಗುವುದಾದರೆ ಅವರು ಹೋಗಲಿ. ಪಕ್ಷ ಬಿಟ್ಟು ಹೋಗುವಾಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ರೆಡ್ಡಿ ತಿರುಗೇಟು ನೀಡಿದ್ದಾರೆ.
ಶ್ರೀರಾಮುಲು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಕೊಡುವುದಕ್ಕೆ ಬಂದಿದ್ದೇನೆ. ಮೊದಲಿಗೆ ನಾನು ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಸೇರಿದ್ದೇನೆ. ನನ್ನ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದ್ದೇನೆ. 18 ಕ್ಷೇತ್ರದಲ್ಲಿ ಓಡಾಟ ಮಾಡಿದ್ದೇನೆ. ಬಳ್ಳಾರಿ ಬಿಟ್ಟು ಬೇರೆ ಕಡೆಗಳಲ್ಲಿ ಓಡಾಟ ಮಾಡಿದ್ದೇನೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದೇನೆ ಎಂದರು.
ಬಳ್ಳಾರಿಗೆ ಹೋಗಲು ಆಗುತ್ತಿರಲಿಲ್ಲ. ಅದಾದ ಮೇಲೆ ನನಗೆ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿತು. ಸಂಡೂರು ಎಸ್‌ಟಿ ಮೀಸಲು ಕ್ಷೇತ್ರ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಾಮುಲು ಅವರು ಮೂರು ದಿನ ತಡವಾಗಿ ಸಂಡೂರು ಕ್ಷೇತ್ರಕ್ಕೆ ಬಂದ್ರು. ಅವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಸಿಎಂ ಆದಿಯಾಗಿ ಸರ್ಕಾರವೇ ಬಂದು ಕುಳಿತಿತ್ತು. ಹಣದ ಹೊಳೆ ಹರಿಸಿದ್ರು, ಹೀಗಾಗಿ, ನಮಗೆ ಸೋಲಾಯಿತು. ನಾನು ಛಾಡಿ ಹೇಳುವ ಕೆಳಮಟ್ಟಕ್ಕೆ ಹೋಗುವುದಿಲ್ಲ. ಅವರಿಗೆ ಅಭದ್ರತೆ ಕಾಡುತ್ತಿರಬೇಕು ಎಂದು ದೂರಿದರು.
ಇನ್ನೂ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಬಾಂಬ್ ಸಿಡಿಸಿದ್ದಾರೆ.
ಪಕ್ಷ ಬಿಡೋದು ರಾಮುಲು ವೈಯಕ್ತಿಕ ವಿಚಾರ. ಪಕ್ಷ ಬಿಟ್ಟು ಹೋದ್ರೆ ಹೋಗಲಿ. ಆದ್ರೆ ನನ್ನ ಮೇಲೆ ಆರೋಪ ಮಾಡಿ ಹೋಗೋದು ಸರಿಯಲ್ಲ. ಅವರು ಕಾಂಗ್ರೆಸ್ಗೆ ಹೋಗ್ತಾರಾ ಇನ್ನೆಲ್ಲಿಗೆ ಹೋಗ್ತಾರೆ ಅವರಿಗೆ ಬಿಟ್ಟಿದ್ದು. ಡಿಕೆಶಿ ಅವರು ಸತೀಶ್ ಜಾರಕಿಹೊಳಿಯವರನ್ನು ಮಣಿಸಲು ರಾಮುಲುನ ಪಕ್ಷಕ್ಕೆ ಹೇಗಾದರೂ ಕರೆದುಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ರಾಮುಲುಗೆ ಬಳ್ಳಾರಿಯಲ್ಲಿ ಇರೋ ವಾತಾವರಣ ನೋಡಿಕೊಂಡು ಡಿಕೆಶಿ ಅವರನ್ನು ಕರೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಈ ಕುರಿತು ಬಳ್ಳಾರಿ ಭಾಗದಲ್ಲೆಲ್ಲ ಜನ ಮಾತಾಡ್ತಿದ್ದಾರೆ. ಇಡೀ ಬಳ್ಳಾರಿಯಲ್ಲಿ ಇದರ ಬಗ್ಗೆ ದೊಡ್ಡ ಸುದ್ದಿ ಹಬ್ಬಿದೆ ಎಂದು ಇದೇ ವೇಳೆ ತಿಳಿಸಿದರು.
ಇದೇ ವೇಳೆ ಹಳೆಯ ಘಟನೆಯನ್ನು ಮೆಲುಕು ಹಾಕಿದ ಜನಾರ್ದನ ರೆಡ್ಡಿ, ರಾಮುಲು ಅವರನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ರಾಮುಲು ಅವರ ಮಾವ ರೈಲ್ವೇ ಬಾಬು ಅವರನ್ನು ಕೊಲೆ ಮಾಡಲಾಗುತ್ತದೆ. 1991ರಲ್ಲಿ ಆದ ಭೀಕರ ಕೊಲೆ ಅದು. ಆಗ ರಾಜಕೀಯ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಲು ಶ್ರೀರಾಮುಲು ಮುಂದಾಗಿದ್ದರು. ಅವರು ಚಾಕು, ಬೆನ್ನಿಗೆ ಲಾಂಗು ಹಿಡಿದುಕೊಂಡು 40 ಜನ ಬೆಂಬಲಿಗರ ಜೊತೆ ಬಂದಿದ್ರು. ಅಂದು ರಾಮುಲು ಅವರನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಅವರ ಮೇಲೂ ಜೀವ ಬೆದರಿಕೆ ಇತ್ತು. ರಕ್ಷಣೆಗಾಗಿ ರಾಮುಲು ಹುಡುಗರ ಜೊತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಅಂದು ರಾಮುಲು ಅವರನ್ನು ನಾವು ಉಳಿಸಿಕೊಳ್ಳಬೇಕಾಗಿತ್ತು. ನಮ್ಮ ತಾಯಿ ಕಾಪಾಡು ಅವನನ್ನು ಎಂದಿದ್ರು. ಅಂದು ನಾನು ಅವರ ಜೊತೆಗೆ ನಿಂತೆ. ನಾನು ಅವರನ್ನು ಉಳಿಸಿಕೊಂಡೆ ಎಂದು ಹೇಳಿದರು.

