ಮಂಗಳೂರು : ಶ್ರೀರಾಮ ಸೇನೆ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಳಿಯ ಮಸಾಜ್ ಸೆಂಟರ್‌ವೊಂದಕ್ಕೆ ದಾಳಿ ಮಾಡಿರುವ ಘಟನೆಯೊಂದು ಗುರುವಾರ (ಜ.23) ನಡೆದಿದೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆರೋಪದ ಮೇರೆಗೆ ಮಂಗಳೂರಿನ ಬಿಜೈಯಲ್ಲಿರುವ ಕಲರ್ಸ್ ಎಂಬ ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಲಾಗಿದೆ.
ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆಯ ಹತ್ತು ಜನ ಕಾರ್ಯಕರ್ತರು ಬಿಜೈ ಕೆಎಸ್‍ಆರ್‍ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿದ್ದಾರೆ. ಸೆಲೂನ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ದಾಳಿ ವೇಳೆ, ನಾಲ್ಕು ಜನ ಯುವತಿಯರು ಹಾಗೂ ಓರ್ವ ವ್ಯಕ್ತಿ ಸೆಲೂನ್‍ನಲ್ಲಿ ಇದ್ದರು. ಈ ವೇಳೆ ವ್ಯಕ್ತಿಯ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ನಗರದಾದ್ಯಂತ ಇರುವ ಮಸಾಜ್ ಸೆಂಟರ್‍ಗಳನ್ನು ಮುಚ್ಚುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ದಾಳಿ ಮಾಡಿದ್ದವರ ಬಂಧನಕ್ಕೆ ಪರಮೇಶ್ವರ್ ಸೂಚನೆ :
ಘಟನೆ ಬಗ್ಗೆ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸಲು ನಾನು ಸೂಚಿಸಿದ್ದೇನೆ. ಯಾವ ಉದ್ದೇಶಕ್ಕೆ ದಾಳಿಯಾಗಿದೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.
ಅನೈತಿಕ ಚಟುವಟಿಕೆ ನಡೆಸುವ ಪಾರ್ಲರ್ಗಳಿದ್ದರೆ ದೂರು ಕೊಡಿ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕಾರ್ಪೊರೇಷನ್ನವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ. ಯಾವ ಕಂಡೀಷನ್ ಹಾಕಿ ಕೊಟ್ಟಿರ್ತಾರೆ ಅದನ್ನು ಪಾಲಿಸದಿದ್ದರೆ, ನಿಯಮಾವಳಿಗಳನ್ನು ಮೀರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.
ಪ್ರಸಾದ್ ಅತ್ತಾವರ ಸಿಸಿಬಿ ವಶಕ್ಕೆ :
ಮಂಗಳೂರಿನ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸೇನೆ ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

