ಟೋಕಿಯೋ : ಇಂದು ಜಪಾನ್ಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ತಮ್ಮ ಎರಡು ದಿನಗಳ ಪ್ರವಾಸವನ್ನು ಆರಂಭಿಸಿದರು. ಈ ವೇಳೆ ಜಪಾನ್ ಪ್ರಧಾನಿ ಶಿಗೇರು ಇಶಿಬಾರನ್ನು ಭೇಟಿಯಾದ ಅವರು, 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿ, ಹಲವು ವಿಷಯಗಳು ಹಾಗೂ ಮಹತ್ವದ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.
ಟೋಕಿಯೋಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಮೋದಿ ಜಪಾನ್‌ನ ಅತ್ಯಂತ ಪ್ರಸಿದ್ಧ ಅದೃಷ್ಟಶಾಲಿ ಎಂದೇ ಕರೆಯಲ್ಪಡುವ ಹಾಗೂ ಬಹಳ ವಿಶೇಷತೆಗಳನ್ನು ಹೊಂದಿರುವ ದಾರುಮಾ ಗೊಂಬೆಯನ್ನು ಶೋರಿಂಜನ್ ದಾರುಮಾ-ಜಿ ದೇವಾಲಯದ ಮುಖ್ಯ ಅರ್ಚಕರಿಂದ ಉಡುಗೊರೆಯಾಗಿ ಸ್ವೀಕರಿಸಿದರು. ಈ ಗೊಂಬೆಗೆ ದುಂಡಿನ, ಅಗಲವಾದ ಕಣ್ಣುಗಳಿವೆ. ನೋಡುಗರ ಗಮನ ಸೆಳೆಯುವಂತ ಗೊಂಬೆಯ ವಿಶೇಷತೆಗಳೇನು? ಇದನ್ನು ಭಾರತದ ಪ್ರಧಾನಿಗೆ ಹಸ್ತಾಂತರಿಸಿದರ ಉದ್ದೇಶವೇನು? ಎಂಬ ಕೆಲವು ಕೌತುಕದ ಪ್ರಶ್ನೆಗಳಿಗೆ ಹೀಗಿದೆ ಉತ್ತರ.
ದಾರುಮಾ ಗೊಂಬೆಯು ನೋಡಲು ಒಂದು ಚಿತ್ರಿಸಿದ ಗೊಂಬೆಯಂತೆ ಕಾಣುತ್ತದೆ. ಇದು ದುಂಡಾಗಿ, ಕೆಂಪು ಬಣ್ಣದಲ್ಲಿದೆ. ದಿಟ್ಟಿಸುತ್ತಿರುವ ಕಣ್ಣುಗಳನ್ನು ಹೊಂದಿರುವ ಈ ಗೊಂಬೆಗೆ ಆಳವಾದ ಹಿನ್ನೆಲೆಯಿದೆ ಎಂಬುದು ಕುತೂಹಲಕಾರಿ ವಿಷಯ. ಶತಮಾನಗಳ ಹಿಂದೆ ಜಪಾನ್‌ನಲ್ಲಿ ಝೆನ್ ಬೌದ್ಧಧರ್ಮವನ್ನು ಸ್ಥಾಪಿಸಿದ ಬೌದ್ಧ ಸನ್ಯಾಸಿ ಬೋಧಿಧರ್ಮನ ಮಾದರಿಯಲ್ಲಿ ಈ ಪ್ರತಿಮೆಯನ್ನು ತಯಾರಿಸಲಾಗಿದೆ.
ಅದೃಷ್ಟ ಹೊತ್ತು ತರುವ ಬೊಂಬೆ ಎಂಬ ನಂಬಿಕೆ ಗಾಢ. “ಏಳು ಬಾರಿ ಬಿದ್ದು ಎಂಟು ಬಾರಿ ಎದ್ದೇಳು” ಎಂಬ ಜಪಾನೀಸ್ ನುಡಿಗಟ್ಟಿನ ಸಾಕಾರ. ಸಾಂಪ್ರದಾಯಿಕವಾಗಿ, ಜಪಾನಿನ ಜನರು ವೈಯಕ್ತಿಕ ಗುರಿಯನ್ನು ಸಾಧಿಸುವ ಉದ್ದೇಶದಿಂದ ಗೊಂಬೆಯ ಒಂದು ಕಣ್ಣಿಗೆ ಬಣ್ಣ ಹಚ್ಚುತ್ತಾರೆ. ಗುರಿ ಪೂರ್ಣಗೊಳ್ಳುವವರೆಗೆ ಇನ್ನೊಂದು ಕಣ್ಣು ಖಾಲಿಯಾಗಿರುತ್ತದೆ. ನಿಮ್ಮ ಗುರಿಯನ್ನು ಸಾಧಿಸಲು ಇದು ನಿರಂತರ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಮಾತು.
ಪ್ರಧಾನಿ ಮೋದಿ ಅವರಿಗೆ ದಾರುಮವನ್ನು ಉಡುಗೊರೆಯಾಗಿ ನೀಡುವುದು ಆಳವಾದ ಅರ್ಥವನ್ನು ಹೊಂದಿದೆ. ಇದು ಕೇವಲ ಸ್ನೇಹಪರ ಸೂಚಕವಲ್ಲ. ಬದಲಿಗೆ ವೈಯಕ್ತಿಕ ಮತ್ತು ರಾಷ್ಟ್ರೀಯ ಗುರಿಗಳಲ್ಲಿ ಯಶಸ್ಸಿನ ಆಶಯವಾಗಿದೆ. ಈ ಗೊಂಬೆಯನ್ನು ಮತ್ತೊಂದು ದೇಶದ ಪ್ರಧಾನಿಗೆ ಅಥವಾ ಅಧ್ಯಕ್ಷರಿಗೆ ನೀಡುವುದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಶ್ವಾಸ ಮತವನ್ನು ಹಂಚಿದಂತೆ ಎಂಬರ್ಥ ಎನ್ನಲಾಗಿದೆ.
ಭಾರತ ಮತ್ತು ಜಪಾನ್ ಸಹಯೋಗದೊಂದಿಗೆ ಚಂದ್ರಯಾನ 5 ಕಾರ್ಯಚರಣೆ
ಮುಂಬರುವ ಚಂದ್ರಯಾನ -5 ಕಾರ್ಯಾಚರಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ನಡುವಿನ ಸಹಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಆಗಸ್ಟ್ 29) ಘೋಷಿಸಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗಿನ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರು ಭಾರತ ಮತ್ತು ಜಪಾನ್ ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಸಹಯೋಗವನ್ನು ಘೋಷಿಸಿದರು.ಈ ವೇಳೆ ಮಾತನಾಡುತ್ತಾ, ಏಷ್ಯಾದ ಎರಡು ಪ್ರಜಾಪ್ರಭುತ್ವ ದೇಶಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರ ಮತ್ತು ವೈಜ್ಞಾನಿಕ ಪಾಲುದಾರಿಕೆಯನ್ನು ಎತ್ತಿ ತೋರಿಸಿದರು.

