ಢಾಕಾ: ಬಾಂಗ್ಲಾದೇಶದಲ್ಲಿ ಕಲಾವಿದರು, ಪ್ರದರ್ಶಕರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನಪ್ರಿಯ ಗಾಯಕ ಜೇಮ್ಸ್ (James) ಅವರ ಸಂಗೀತ ಕಚೇರಿಯನ್ನು ರದ್ದುಗೊಳಿಸಲಾಗಿದೆ.
ಢಾಕಾದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಫರೀದ್‌ಪುರದಲ್ಲಿ ಸ್ಥಳೀಯ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ 9 ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮ ಆರಂಭಕ್ಕೂ ಮುನ್ನ ದಾಳಿಕೋರರ ಗುಂಪೊಂದು ಸ್ಥಳಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದೆ. ಈ ವೇಳೆ ಇಟ್ಟಿಗೆಗಳು ಹಾಗೂ ಕಲ್ಲುಗಳನ್ನು ಎಸೆಯಲಾಗಿದ್ದು, ವಿದ್ಯಾರ್ಥಿಗಳು ಮತ್ತು ದಾಳಿಕೋರರ ನಡುವೆ ಗಲಾಟೆ ನಡೆದಿದೆ.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳ ಸೂಚನೆಯಂತೆ ಸಂಗೀತ ಕಚೇರಿಯನ್ನು ರದ್ದುಗೊಳಿಸಲಾಗಿದೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿ ಲೇಖಕಿ ತಸ್ಲಿಮಾ ನಸ್ರೀನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಾಂಗ್ಲಾದೇಶದಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿರುವ ಮಾದರಿಯನ್ನು ಟೀಕಿಸಿದ್ದಾರೆ. ಜಾತ್ಯತೀತ ಹಾಗೂ ಪ್ರಗತಿಪರ ಚಿಂತನೆ ಬೆಳೆಸುವ ಉದ್ದೇಶದಿಂದ ಸ್ಥಾಪಿತವಾಗಿದ್ದ ಛಾಯಾನೌತ್ ಸಾಂಸ್ಕೃತಿಕ ಕೇಂದ್ರ ಮತ್ತು ಉಡಿಚಿ ಸಂಸ್ಥೆಗಳನ್ನು ಸುಟ್ಟು ಭಸ್ಮಗೊಳಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜಿಹಾದಿ ಗುಂಪುಗಳು ಪ್ರಸಿದ್ಧ ಗಾಯಕ ಜೇಮ್ಸ್ ಅವರಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ವಿಶ್ವಪ್ರಸಿದ್ಧ ಸಂಗೀತಗಾರ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮೊಮ್ಮಗ ಹಾಗೂ ಮೈಹಾರ್ ಘರಾನಾದ ಖ್ಯಾತ ಕಲಾವಿದ ಸಿರಾಜ್ ಅಲಿ ಖಾನ್ ಇತ್ತೀಚೆಗೆ ಢಾಕಾಗೆ ಆಗಮಿಸಿದ್ದರು. ಆದರೆ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಸುರಕ್ಷಿತವಾಗಿಲ್ಲವೆಂದು ಹೇಳಿ, ಯಾವುದೇ ಕಾರ್ಯಕ್ರಮ ನೀಡದೇ ಭಾರತಕ್ಕೆ ಮರಳಿದ್ದಾರೆ.

