ಬೆಳಗಾವಿ, ಡಿಸೆಂಬರ್ 27: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದರೆ ಮಾತ್ರ ಡಿಕೆ ಶಿವಕುಮಾರ್‌ಗೆ ಸಿಎಂ ಭಾಗ್ಯ ಸಿಗಲಿದೆ. ಸಿದ್ದರಾಮಯ್ಯರಿಂದ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅವರು ತಾವಾಗಿಯೇ ಸ್ಥಾನ ಬಿಟ್ಟು ಕೊಡಬೇಕು. ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಅಷ್ಟೇ ಸುಲಭವಲ್ಲ’ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತು ಚರ್ಚೆಗಳು ಜೋರಾಗಿರುವ ನಡುವೆಯೇ, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಬೆಳಗಾವಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಈ ಬಾರಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುತ್ತಾರೆ’ ಎಂಬ ಮಾತು ಕೇಳಿಬರುತ್ತಿದ್ದರೂ, ಅಹಿಂದ ಕೂಗು ಬಲವಾಗಿದ್ದು, ಮತ್ತೊಂದೆಡೆ ಹೈಕಮಾಂಡ್ ಸಂಪರ್ಕಕ್ಕೆ ಸಿಗದೇ ಡಿಕೆ ಬ್ರದರ್ಸ್ ಪರದಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್‌ಗೆ ನಿರಾಸೆಯೇ ಎದುರಾಗಲಿದೆ ಎಂದು ಕೋಡಿ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
‘ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳುವುದು ತುಂಬಾ ಕಷ್ಟ. ಸಿದ್ದರಾಮಯ್ಯ ಅವರು ತಾವಾಗಿಯೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗಬಹುದು’ ಎಂದು ಶ್ರೀಗಳು ಭವಿಷ್ಯ ನುಡಿದರು.
ಇದೇ ವೇಳೆ, ‘ಅರಸನ ಅರಮನೆಗೆ ಕಾರ್ಮೋಡ ಕವಿದಿದೆ. ಅರಸನ ಬಂಡಾರವೇ ಬಜೆಟ್’ ಎಂಬ ಸಂಕೇತಾತ್ಮಕ ಹೇಳಿಕೆಯನ್ನು ನೀಡಿದ ಶ್ರೀಗಳು, ‘ವರ್ಷದ ಬಜೆಟ್ ಮುಗಿದ ಬಳಿಕ ಅವರಾಗಿ ಸ್ಥಾನ ಬಿಟ್ಟು ಕೊಟ್ಟರೆ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ರಾಜ್ಯದಲ್ಲೂ, ಕೇಂದ್ರದಲ್ಲೂ ಪರಿಸ್ಥಿತಿ ಬದಲಾವಣೆ ಕಷ್ಟ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತ, ಸಿಎಂ ಕನಸು ಕಟ್ಟಿಕೊಂಡಿರುವ ಡಿಸಿಎಂಗೆ ಹೈಕಮಾಂಡ್‌ನಿಂದ ಶಾಕ್ ಎದುರಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ಇಲ್ಲದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ನಡುವೆ CWC ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ಪ್ರಭಾವ ತೋರಿದ್ದು, ಸಚಿವ ಸಂಪುಟ ಪುನರ್‌ರಚನೆಗೆ ಮತ್ತೊಂದು ಸುತ್ತಿನ ಕಸರತ್ತು ಆರಂಭಿಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಗೊಂದಲಗಳಿಗೆ ಹೈಕಮಾಂಡ್ ಮಧ್ಯಪ್ರವೇಶಿಸುವ ಸಾಧ್ಯತೆ ಕಡಿಮೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಮುಖ್ಯಮಂತ್ರಿ ತಮ್ಮ ಪರವಾದ ವಾತಾವರಣವನ್ನು ಬಳಸಿಕೊಂಡು ಸಂಪುಟ ಪುನರ್‌ರಚನೆಯ ಮೂಲಕ ನಾಯಕತ್ವವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ಡಿಕೆ ಶಿವಕುಮಾರ್ ಅವರನ್ನು ಸಿಎಂ ಕುರ್ಚಿಯಿಂದ ದೂರ ಇಡುವ ಯತ್ನವೆಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ.
ರಾಜಧಾನಿ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದು, ಅದಕ್ಕೂ ಮುನ್ನ ವರಿಷ್ಠ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಹೊರಡುವ ಮೊದಲು ಮಾತನಾಡಿದ ಅವರು, ‘4–5 ತಿಂಗಳ ಹಿಂದೆಯೇ ಸಚಿವ ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಅನುಮತಿ ನೀಡಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳಲಿ ಎಂಬ ಕಾರಣಕ್ಕೆ ತಾವೇ ವಿಳಂಬ ಮಾಡಿದ್ದೆ’ ಎಂದು ಹೇಳಿದ್ದಾರೆ.

