ಬೀದರ್, ಫೆಬ್ರವರಿ 9: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧರಿ ಹನುಮಾನ್ ದೇವಸ್ಥಾನದ ಸಮೀಪ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗೆ ಸಂಬಂಧಿಸಿದಂತೆ ಭಾರಿ ದುರಂತವೊಂದು ತಪ್ಪಿದ ಘಟನೆ ನಡೆದಿದೆ.
ಔರಾದ್‌ನಿಂದ ಮುಗಳಖೋಡಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನ ಜಾಯಿಂಟ್ ರಾಡ್ ಏಕಾಏಕಿ ಕಟ್ ಆಗಿ, ಡೀಸೆಲ್ ಟ್ಯಾಂಕ್‌ಗೆ ಬಡಿದ ಪರಿಣಾಮ ಡೀಸೆಲ್ ಸೋರಿಕೆ ಆರಂಭವಾಯಿತು. ಬಸ್ ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ಚಾಲಕ ತಕ್ಷಣ ಪರಿಸ್ಥಿತಿಯನ್ನು ಗಮನಿಸಿ ಬಸ್ ನಿಲ್ಲಿಸಿದ್ದು, ಭಾರೀ ಅನಾಹುತ ತಪ್ಪುವಂತಾಯಿತು.
ಬಸ್ ವೇಗದಲ್ಲಿದ್ದರೆ ಡೀಸೆಲ್ ಸೋರಿಕೆಯಿಂದ ಬೆಂಕಿ ತಗುಲುವ ಸಾಧ್ಯತೆ ಇದ್ದು, ಅದು ದೊಡ್ಡ ದುರಂತಕ್ಕೆ ಕಾರಣವಾಗಬಹುದಾಗಿತ್ತು ಎಂದು ತಿಳಿದುಬಂದಿದೆ. ಈ ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.
ಕಿಲೋಮೀಟರ್ ಗಟ್ಟಲೆ ರಸ್ತೆ ಮೇಲೆ ನೀರಿನಂತೆ ಡೀಸೆಲ್ ಸೋರಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸ್ವಲ್ಪ ಯಮಾರಿದ್ದರೂ ಭಾರಿ ಅನಾಹುತಕ್ಕೆ ಸಾಕ್ಷಿಯಾಗಬಹುದಾದ ಈ ಘಟನೆ, ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

