ಬೆಂಗಳೂರು : ಡೆಂಘೀ, ಝೀಕಾ ನಡುವೆ ಇನ್ಫೂಯೆಂಜಾ ಕಾಯಿಲೆಯ ಹಾವಳಿ ಶುರುವಾಗಿದೆ. ವಾತಾವರಣ ಬದಲಾವಣೆಯಿಂದ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗಿದ್ದು ರಾಜ್ಯದಲ್ಲಿ ಇನ್ಫೂಯೆಂಜಾ ಕಾಯಿಲೆಗಳಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ.
ವಾತವರಣದಲ್ಲಿ ಬದಲಾವಣೆಯಿಂದ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುವರ ಸಂಖ್ಯೆ ಹೆಚ್ಚಳವಾಗಿದ್ದು ಬಿಸಿಲು ಮಳೆ ಕಳ್ಳಾಟಕ್ಕೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗುತ್ತಿವೆ. ಜ್ವರ ಕೆಮ್ಮು ನೆಗಡಿಯಿಂದ ನೂರಾರು ಮಂದಿ ಆಸ್ಪತ್ರೆಗಳತ್ತಾ ಮುಖ ಮಾಡುತ್ತಿದ್ದಾರೆ.
23 ಸಾವಿರದ ಗಡಿ ದಾಟಿದ ಡೆಂಘೀ ಪ್ರಕರಣಗಳು :
ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು ರಾಜ್ಯದಲ್ಲಿ ಇಲ್ಲಿಯವರೆಗೂ 23163 ಡೆಂಘೀ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ 1182 ಡೆಂಘೀ ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ 199 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ.
ಇಲ್ಲಿಯವರೆಗೆ ಡೆಂಘೀ ಜ್ವರಕ್ಕೆ 10 ಮಂದಿ ಬಲಿಯಾಗಿದ್ದು ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 9 ಮಕ್ಕಳಿಗೆ ಡೆಂಘೀ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದೊಳಗಿನ 454 ಮಕ್ಕಳಲ್ಲಿ ಡೆಂಘೀ ದೃಡಪಟ್ಟಿದೆ.
ಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 79 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದ್ದು ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 8261 ಮಂದಿಯಲ್ಲಿ ಡೆಂಘೀ ದೃಡಪಟ್ಟಿದೆ.
ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 111 ಜನರಲ್ಲಿ ಡೆಂಘೀ ಪತ್ತೆಯಾಗಿದ್ದು ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 14448 ಮಂದಿಗೆ ಡೆಂಘೀ ದೃಡವಾಗಿದೆ.

