ಬೆಂಗಳೂರು, 30 ನವೆಂಬರ್ 2025: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ (80) ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಕಳೆದ ಕೆಲವು ವಾರಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.
ಸುಮಾರು ಆರು ದಶಕಗಳ ಕಾಲ ನೂರಾರು ಕನ್ನಡ ಚಿತ್ರಗಳಲ್ಲಿ ಮನರಂಜನೆ ಪಸರಿಸಿದ ಉಮೇಶ್, ತಮ್ಮ ವಿಶಿಷ್ಟ ಹಾಸ್ಯಶೈಲಿ, ನೈಸರ್ಗಿಕ ಅಭಿನಯ ಮತ್ತು ಡೈಲಾಗ್ ಡೆಲಿವರಿಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದರು. ರಂಗಭೂಮಿ, ಸೀರಿಯಲ್ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಅವರು ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ (80) ಅವರ ನಿಧನದ ಹಿಂದೆ ಇದ್ದ ಆರೋಗ್ಯ ಸ್ಥಿತಿಯನ್ನು ಅವರ ಪುತ್ರಿ ಭಾವುಕರಾಗಿ ವಿವರಿಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಕ್ಯಾನ್ಸರ್ ಪೀಡಿತರಾಗಿದ್ದ ಉಮೇಶ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಗಿತ್ತು.
ಉಮೇಶ್ ಅವರ ಪುತ್ರಿಯವರ ಹೇಳಿಕೆಯ ಪ್ರಕಾರ, ಅಕ್ಟೋಬರ್ 10ರಿಂದಲೇ ಅವರಿಗೆ ಸಂಪೂರ್ಣ ಹುಷಾರಿರಲಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ 4ನೇ ಹಂತದ ಕ್ಯಾನ್ಸರ್ ಕಂಡುಬಂದಿದ್ದು, ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಿದ್ದರೂ ಯಾವುದೇ ಸುಧಾರಣೆ ಕಾಣಿಸದೆ ಅವರ ಸ್ಥಿತಿ ಗಂಭೀರವಾಗುತ್ತಿತ್ತು.
“ನವೆಂಬರ್ 14ರಂದು ಅವರನ್ನು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ನಿನ್ನೆ ನಟ ರಮೇಶ್ ಭಟ್ ಅವರು ಭೇಟಿ ನೀಡಿ ಧೈರ್ಯ ಹೇಳಿಕೆ ನೀಡಿದರು. ಆದರೆ ಅಪ್ಪನ ಮಾತು ಆಗಾಗ ನಿಂತುಹೋಗುತ್ತಿತ್ತು. ಅಂತಿಮ ದಿನಗಳಲ್ಲಿ ಅವರು ಮಾತನಾಡಲು ಸಾಧ್ಯವಾಗದೆ, ಕೇವಲ ಸನ್ನೆ ಮಾಡಿ ಪ್ರತಿಕ್ರಿಯಿಸುತ್ತಿದ್ದರು,” ಎಂದು ಪುತ್ರಿ ಕಣ್ಣೀರಿಟ್ಟು ಹೇಳಿದ್ದಾರೆ.
ಮನೆಯಲ್ಲಿದ್ದ ತಾಯಿ ಕೂಡಾ ಪತಿಯ ಅನಾರೋಗ್ಯದಿಂದಾಗಿ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದು, ಲೋ ಬಿಪಿ ಕಾರಣದಿಂದ ಮನೆದಲ್ಲೇ ಇರಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ಕುಟುಂಬದವರು ಅಂತ್ಯಕ್ರಿಯೆಗಾಗಿ ಸಿದ್ಧತೆ ನಡೆಸುತ್ತಿರುವ ವೇಳೆ, ಕನ್ನಡ ಚಿತ್ರರಂಗದಲ್ಲಿ ಶೋಕಾಚರಣೆಯ ವಾತಾವರಣ ಉಂಟಾಗಿದೆ. ಹಿರಿಯ ನಟನ ಅಂತಿಮ ಕ್ಷಣಗಳು ಕುಟುಂಬವನ್ನು ಮಾತ್ರವಲ್ಲದೇ ಅಭಿಮಾನಿಗಳನ್ನೂ ಮಡುಗಟ್ಟುವಂತೆ ಮಾಡಿವೆ. ಹಲವಾರು ನಟರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.

