ಬೆಂಗಳೂರು, ಡಿಸೆಂಬರ್ 10: ಕಾಂತಾರ ಚಾಪ್ಟರ್-1 ಮೂಲಕ ದೇಶಾದ್ಯಂತ ಗುರುತಿಸಿಕೊಂಡಿರುವ ನಟಿ ರುಕ್ಮಿಣಿ ವಸಂತ್ ಅವರಿಗೆ ಇಂದು (ಡಿ.10) ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿರುವ ರುಕ್ಮಿಣಿ, ಕಾಂತಾರ ನಂತರ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಂಬಾಳೆ ಸಂಸ್ಥೆ ತಮ್ಮ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ರುಕ್ಮಿಣಿಗೆ ಹುಟ್ಟುಹಬ್ಬದ ಹಾರೈಸಿದೆ.
2019ರಲ್ಲಿ ಬಿಡುಗಡೆಯಾದ ‘ಬಿರ್‌ಬಲ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರುಕ್ಮಿಣಿ ವಸಂತ್ ಬಳಿಕ ಹಿಂದಿ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ವಿಶೇಷವಾಗಿ ಈ ವರ್ಷ ತೆರೆಕಂಡ ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ಕನಕಾವತಿ ಪಾತ್ರದ ಮೂಲಕ ಐಕಾನಿಕ್ ಇಮೇಜ್ ಪಡೆಯಲು ಯಶಸ್ವಿಯಾಗಿದ್ದಾರೆ.
ಇದಲ್ಲದೆ, ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಪ್ರಾಜೆಕ್ಟ್ ‘ಟಾಕ್ಸಿಕ್’ ಸಿನಿಮಾದಲ್ಲೂ ನಟಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿದ್ದಾರೆ. ನಟ ಶ್ರೀಮುರಳಿ ಅಭಿನಯದ ‘ಬಘೀರ’, ರಕ್ಷಿತ್ ಶೆಟ್ಟಿ ಜೊತೆಯ ‘ಸಪ್ತ ಸಾಗರದಾಚೆ ಎಲ್ಲೋ’, ಶಿವರಾಜ್‌ಕುಮಾರ್ ಜೊತೆಗಿನ ‘ಭೈರತಿ ರಣಗಲ್’ ಸಿನಿಮಾಗಳಲ್ಲಿ ಗಮನಾರ್ಹ ಅಭಿನಯ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಜೂ.ಎನ್‌ಟಿಆರ್ – ಪ್ರಶಾಂತ್ ನೀಲ್ ಅವರ ತೆಲುಗು ಚಿತ್ರ ಹಾಗೂ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಸಿನಿಮಾಗಳಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಲಿರುವುದಾಗಿ ವರದಿಯಾಗಿದೆ.
ನಟಿ ರುಕ್ಮಿಣಿ ವಸಂತ್ ಅವರಿಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದಿಂದ ಹುಟ್ಟುಹಬ್ಬದ ಹಾರೈಕೆಗಳ ಮಳೆ ಸುರಿಯುತ್ತಿದೆ.

