ಉಡುಪಿ, ಡಿಸೆಂಬರ್ 10: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಉಡುಪಿಗೆ ಆಗಮಿಸಿದ್ದ ವೇಳೆ ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದ 10 ಮಂದಿ ಬಾಂಗ್ಲಾದೇಶಿ ಪ್ರಜೆಗಳಿಗೆ ಉಡುಪಿ ನ್ಯಾಯಾಲಯವು ಎರಡು ವರ್ಷದ ಕಾರಾಗೃಹ ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡವನ್ನು ವಿಧಿಸಿದೆ.
ಶಿಕ್ಷೆಗೆ ಒಳಗಾದವರು—ಹಕೀಮ್ ಅಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಮೊಹಮ್ಮದ್ ಸೋಜಿಬ್, ರಿಮೂಲ್, ಮೊಹಮ್ಮದ್ ಇಮಾಮ್ ಶೇಖ ಮತ್ತು ಮೊಹಮ್ಮದ್ ಜಹಾಂಗಿರ ಆಲಂ.
2024ರ ಅಕ್ಟೋಬರ್ 11ರಂದು ಮಲ್ಪೆಯ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿಯಿಂದ 7 ಮಂದಿಯನ್ನು ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ನಡೆದ ತನಿಖೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಉಳಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಅವರು ದೇಶದಲ್ಲಿ ಯಾವುದೇ ಅಧಿಕೃತ ಅನುಮತಿ ಅಥವಾ ದಾಖಲೆಗಳನ್ನು ಪಡೆಯದೇ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಬಾಂಗ್ಲಾದೇಶದಿಂದ ಪಡುತೋನ್ಸೆ ಗ್ರಾಮದ ಹೂಡೆ ಪ್ರದೇಶಕ್ಕೆ ಬಂದಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.
ಉಡುಪಿಯ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯವು ವಿಚಾರಣೆ ನಡೆಸಿ ಶಿಕ್ಷೆಯನ್ನು ಘೋಷಿಸಿದೆ.

