ಬೆಂಗಳೂರು: ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ.
ಗೃಹಸಚಿವರು ಹೇಳೋದೇನು..?
ನಟ ದರ್ಶನ್ ಜೈಲಿನ ಪೋಟೋ ಬಗ್ಗೆ ಮಾತನಾಡಿದ ಗೃಹಸಚಿವ ಜಿ ಪರಮೇಶ್ವರ್, ” ನಟ ದರ್ಶನ್ ಮತ್ತು ನಾಲ್ಕು ಜನ ಟೀ ಕುಡಿದುಕೊಂಡು ಆರಾಮಾಗಿರುವ ಫೋಟೋ ಬಂತು. ಡಿಜಿ ಬಂಧೀಖಾನೆಗೆ ಮಾತನಾಡಿ ಸಂಬಂಧ ಪಟ್ಟ ಅಧಿಕಾರಿ ಕಳಿಸಿದ್ದೆ. ರಾತ್ರಿ 1 ಗಂಟೆವರೆಗೆ ತನಿಖೆ ಆಗಿದೆ. ಏಳು ಜನ ಅಮಾನತು ಮಾಡಿದ್ದೇವೆ ” ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಅಧೀಕ್ಷಕರ ಅವರ ವಿರುದ್ದ ಕೂಡ ಕ್ರಮ ಕೈಗೊಳ್ಳುತ್ತೇವೆ. ಜಾಮರ್ ಹಾಕಿದಿವಿ ಸಿಸಿಟಿವಿ ಹಾಕಿದಿವಿ. ಆದರೂ ಇಂಥ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ.
ನಟ ದರ್ಶನ್‌ಗೆ ಸೌಲಭ್ಯಗಳನ್ನು ನೀಡುವ ಬಗ್ಗೆ ಯಾರ ಒತ್ತಡವೂ ಕೂಡ ಇರಲಿಲ್ಲ. ಯಾರೂ ಕೂಡ ನನ್ನ ಲೆವೆಲ್‌ಗೆ ಮುಟ್ಟುವುದಕ್ಕೆ ಆಗುವುದಿಲ್ಲ. ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ. ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ತೇವೆ ಎಂದು ಜಿ ಪರಮೇಶ್ವರ್ ಹೇಳಿದರು.
ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುರ್ಚಿಗಳಲ್ಲಿ ಕುಳಿತು ಚಹಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರ ಹಾಗೂ ಜೈಲು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದರು.