ನವದೆಹಲಿ : ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದ ನದಿಗಳು ಹಾಗೂ ಅಣೆಕಟ್ಟುಗಳು ನಮಗೆ ಸೇರುತ್ತವೆ ಎಂದು ಲಷ್ಕರ್-ಎ-ತೈಬಾ (LeT)ದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಭಾರತಕ್ಕೆ ಸವಾಲೆಸೆದಿದ್ದಾನೆ.
ಸುಮಾರು 2 ನಿಮಿಷಗಳ ವೀಡಿಯೊದಲ್ಲಿ, ಕಸೂರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ. ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದ ನದಿಗಳು ಹಾಗೂ ಅಣೆಕಟ್ಟುಗಳು ನಮಗೆ ಸೇರುತ್ತವೆ ಎಂದು ಆತ ಹೇಳಿದ್ದಾನೆ.
ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿರುವ ಕಸೂರಿ, ಎಲ್‌ಇಟಿಯ ನಿರಂತರ ಕಾರ್ಯಾಚರಣೆಗಳ ಬಗ್ಗೆ ಹೆಮ್ಮೆಪಡಲು ಈ ವೀಡಿಯೊವನ್ನು ಬಳಸಿದ್ದಾರೆ. ಆದರೆ, ಈ ವಿಡಿಯೋ ಇದೀಗ ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದೆ.
ಈ ವಿಡಿಯೋದಲ್ಲಿ ಭಾರತದ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ನಾಶವಾದ ಸ್ಥಳವಾದ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಪುನರ್ನಿರ್ಮಿಸಲು ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಹಣವನ್ನು ಒದಗಿಸಿದೆ ಎಂದು ಕಸೂರಿ ಹೇಳಿದ್ದಾನೆ.
ಈ ವಿಡಿಯೋದಲ್ಲಿ ಕಸೂರಿ ಎಲ್‌ಇಟಿಯ ಕಾರ್ಯಾಚರಣೆಗಳನ್ನು ಹೊಸ ಸಂಪನ್ಮೂಲಗಳೊಂದಿಗೆ ಬಲಪಡಿಸಲಾಗಿದೆ ಎಂದು ಸುಳಿವು ನೀಡಿದ್ದಾನೆ. ಎಲ್ಇಟಿಗೆ ಪಾಕಿಸ್ತಾನದ ಬೆಂಬಲವನ್ನು ಇದು ಸೂಚಿಸುತ್ತದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುರಿಡ್ಕೆ ಹಲವು ವರ್ಷಗಳಿಂದ ಎಲ್‌ಇಟಿಯ ಕಾರ್ಯಾಚರಣೆಗಳ ಕೇಂದ್ರವಾಗಿದೆ. ಕಸೂರಿಯ ಈ ಹೇಳಿಕೆಗಳು ಈಗ ಆ ಗುಂಪು ತನ್ನ ಕಳೆದುಹೋದ ನೆಲೆಯನ್ನು ಮರಳಿ ಪಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತವೆ.

