ಬೆಂಗಳೂರು, : ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ವರುಣನ ಆರ್ಭಟ ಶುರುವಾಗಿದೆ. ಇಂದು ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಗಾಳಿ, ಮಿಂಚಿನ ಮಳೆಯಾಗಿದೆ. ಇದರ ನಡುವೆ ಸಿಡಿಲಿಗೆ ಜಾನುವಾರು ಸೇರಿದಂತೆ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ಒಂದೇ ದಿನ ಕರ್ನಾಟಕದಲ್ಲಿ ಸಿಡಿಲಿನ ಹೊಡೆತಕ್ಕೆ ಆರು ಜನರು ಬಲಿಯಾಗಿದ್ದಾರೆ.
ಬಳ್ಳಾರಿಯಲ್ಲಿ ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದರೆ ಕೊಪ್ಪಳ ಹಾಗೂ ವಿಜಯಪುರದಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ.
ಬೆಂಗಳೂರಲ್ಲಿ ಅರ್ಧಗಂಟೆ ಸುರಿದ ಮಳೆ
ಬೆಂಗಳೂರಲ್ಲಿ ಇಂದು ಮಧ್ಯಾಹ್ನ ಸುಮಾರು ಅರ್ಧ-ಮುಕ್ಕಾಲು ಗಂಟೆ ಕಾಲ ಜೋರು ಮಳೆಯಾಗಿದೆ. ಭಾರಿ ಮಳೆಯಿಂದ ನಗರದ ವಾಹನ ಸವಾರರು ಪರದಾಡುವಂತಾಯಿತು. ನಗರದ ಅನೇಕ ಭಾಗಗಳಲ್ಲಿ ಗಂಟೆಗೂ ಹೆಚ್ಚುಕಾಲ ನಿರಂತರ ಮಳೆ ಸುರಿದಿದ್ದರಿಂದ ಕೆಲಕಾಲ ಜನಜೀವನ ಅಸ್ತವ್ಯಸ್ಥವಾಗಿತ್ತು.
ಮಂಗಳವಾರ ಸಂಜೆ ಬೆಂಗಳೂರಲ್ಲಿ ವರುಣರಾಯ ಆರ್ಭಟಿಸಿದ್ದು, ನಗರದ ಬಾಣಸವಾಡಿ, ಕಲ್ಯಾಣನಗರ ಪ್ರದೇಶದಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿ ಮಳೆಗೆ ಟೆರೆಸ್ ಮೇಲಿನ ಗಾರ್ಡನ್ ಚೆಲ್ಲಾಪಿಲ್ಲಿಯಾಗಿವೆ. ವರುಣನ ಅಬ್ಬರಕ್ಕೆ ಯಲಚೇನಹಳ್ಳಿ ಬಳಿ ಮೂರು ಮರಗಳು ಧರಾಶಾಹಿಯಾಗಿದ್ದು, ಮರ ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂಗೊಂಡಿವೆ. ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡಿದರು.
ಮಲ್ಲೇಶ್ವರಂನ ಪಿಯುಸಿ ಬೋರ್ಡ್ ಬಳಿ ಮರವೊಂದು ರಸ್ತೆಗುರುಳಿದ್ದು, ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಕಾವೇರಿ ಜಂಕ್ಷನ್ ಬಳಿ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲಿ ಮುರಿದು ಬಿದ್ದಿದೆ. ಮರದ ಕೊಂಬೆ ಮುರಿದು ಬೀಳುವಾಗ ಯಾವುದೇ ವಾಹನ ಸಂಚಾರವಿರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.
.

