ಬೆಂಗಳೂರು: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ಕೊಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ 51 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು,ಯದಗಿರಿ, ಬೆಂಗಳೂರು ಗ್ರಾಮಾಂತರ,ಶಿವಮೊಗ್ಗ ,ತುಮಕೂರು ಜಿಲ್ಲೆಯಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಸಂಬಂಧ ಬಂದಿದ್ದ 12 ದೂರುಗಳ ಸಂಬಂಧ ಈ ಶೋಧಕಾರ್ಯ ಕೈಗೊಳ್ಳಲಾಗಿದೆ.
ತುಮಕೂರಿನ ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಮುದ್ದುಕುಮಾರ್, ಯಾದಗಿರಿಯ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಬಲವಂತ್ ರಾಥೋಡ್, ದೊಡ್ಡಬಳ್ಳಾಪುರದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಆರ್.ಸಿದ್ದಪ್ಪ, ಹೆಬ್ಬಗೋಡಿ ನಗರಸಭೆ ಆಯುಕ್ತ ಕೆ.ನರಸಿಂಹ ಮೂರ್ತಿ, ಬೆಂಗಳೂರಿನ ಕೆಐಡಿಬಿ ಅಧಿಕಾರಿ ಬಿ.ವಿ.ರಾಜಾ, ಕಮರ್ಷಿಯಲ್ ಟ್ಯಾಕ್ಸ್ ಜಂಟಿ ಆಯುಕ್ತ ರಮೇಶ್ ಕುಮಾರ್.
ಬೆಂಗಳೂರು ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅಖ್ತಾರ್ ಅಲಿ, ಭದ್ರಾವತಿ ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಎಸ್.ನಾಗೇಶ್, ಶಿವಮೊಗ್ಗದ ತೋಟಗಾರಿಕೆ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರಕಾಶ್, ಮಂಡ್ಯದ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಮಂಗಳೂರಿನ ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್, ಬೆಂಗಳೂರು ಉತ್ತರ ಉಪವಿಭಾಗದ ಎಫ್‌ಡಿಎ ಟಿ.ಆರ್. ಮಂಜುನಾಥ್ ಮನೆಗಳ ಮೇಲೆ ದಾಳಿ ನಡೆದಿದೆ.
ಇಬ್ಬರು ಲೋಕಾಯುಕ್ತ ಎಸ್‌ಪಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ರಾಜ್ಯದ ಒಟ್ಟು 12 ಕೇಸ್‌ಗಳಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ನಡೆದಿದೆ. ರಾಜ್ಯದ 30 ಕಡೆಗಳಲ್ಲಿ ಒಟ್ಟು ನೂರಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

