ತುಳು ನಾಡಿನ ಪರಂಪರೆಯ ಕಂಬಳ ಕ್ರೀಡೆಯಲ್ಲಿ ಈ ವರ್ಷದಿಂದಲೇ ಹಲವು ಪ್ರಮುಖ ಬದಲಾವಣೆಗಳನ್ನು ಜಾರಿಗೊಳಿಸಲು ಕಂಬಳ ಸಮಿತಿ ನಿರ್ಧರಿಸಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ಸೇರಿದಂತೆ ಆರು ವಿಭಾಗಗಳಲ್ಲಿನ ಸ್ಪರ್ಧೆಗೆ ಸಮಯ ನಿರ್ವಹಣೆ ಮತ್ತು ಅಂಕ ನಿರ್ಧಾರಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಅನ್ವಯವಾಗಲಿವೆ.
ಕನೆ ಹಲಗೆ ವಿಭಾಗಕ್ಕೆ ಸ್ಪಷ್ಟ ನಿಯಮ:
ಈ ಹಿಂದೆ ನೀರು ನಿಶಾನೆಗೆ ತಾಗದಿದ್ದರೂ, ಓಟದ ಸಮಯದಲ್ಲಿ ನೀರು ಹಾಯಿಸಿದ ಎತ್ತರ ಆಧಾರಿಸಿ ಬಹುಮಾನ ನೀಡುವ ಪದ್ಧತಿಯಿಂದ ವಿವಾದಗಳು ಹುಟ್ಟುತ್ತಿದ್ದುದು ಗಮನಕ್ಕೆ ಬಂದಿದೆ. ಈ ಗೊಂದಲಕ್ಕೆ ತೆರೆ ಬೀಳಿಸುವ ನಿಟ್ಟಿನಲ್ಲಿ ಈ ಬಾರಿ 6.5 ಕೋಲು ಮತ್ತು 7.5 ಕೋಲು ನಿಶಾನೆಗೆ ನೀರು ತಾಕಿದರೆ ಮಾತ್ರ ಬಹುಮಾನ ನೀಡಲು ಸಮಿತಿ ನಿರ್ಧರಿಸಿದೆ.
3.30 ಗಂಟೆಯಲ್ಲಿ 5 ಸುತ್ತು ಕಡ್ಡಾಯ:
ಈ ಹಿಂದೆ 4 ಸುತ್ತಿನ ಓಟಕ್ಕೆ ಅವಕಾಶವಿದ್ದ ಕನೆ ಹಲಗೆ ವಿಭಾಗದಲ್ಲಿ ಈಗಿನಿಂದ 3 ಗಂಟೆ 30 ನಿಮಿಷದೊಳಗೆ 5 ಸುತ್ತುಗಳನ್ನು ಪೂರ್ಣಗೊಳಿಸುವುದು ಕಡ್ಡಾಯ. ನಿಗದಿತ ಸಮಯ ಮೀಳಿದಲ್ಲಿ ಹೆಚ್ಚುವರಿ ಅವಕಾಶ ನೀಡಲಾಗುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಕಂಬಳವನ್ನು ನಿಯಮಿತವಾಗಿ 24 ಗಂಟೆಯೊಳಗೆ ಮುಗಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೋಣ ಬಿಡುವ ಸಮಯಕ್ಕೆ ಕಠಿಣ ನಿಯಮ:
ಎಲ್ಲ ವಿಭಾಗಗಳಲ್ಲೂ ಕೋಣ ಗಂತಿಗೆ ಇಳಿಸುವ ಮತ್ತು ಬಿಡುವ ಸಮಯಕ್ಕೆ ಕಟ್ಟುನಿಟ್ಟಿನ ಮಿತಿಗಳನ್ನು ಜಾರಿಗೊಳಿಸಲಾಗಿದೆ.
ಅಡ್ಡ ಹಲಗೆ, ನೇಗಿಲು, ಹಗ್ಗ ಕಿರಿಯ ವಿಭಾಗಗಳು: ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು 3 ನಿಮಿಷ ಅವಕಾಶ. ವಿಳಂಬವಾದರೆ ಅವಕಾಶ ರದ್ದುಗೊಳ್ಳಲಿದೆ.
ಹಗ್ಗ ಹಿರಿಯ, ಅಡ್ಡ ಹಲಗೆ, ನೇಗಿಲು ವಿಭಾಗಗಳು: ಕೋಣ ಬಿಡಲು 5 ನಿಮಿಷ ಕಾಲಾವಕಾಶ.
ಹಗ್ಗ ಕಿರಿಯ ವಿಭಾಗ: ಕೋಣ ಬಿಡಲು 8 ನಿಮಿಷ.
ನೇಗಿಲು ಕಿರಿಯ ವಿಭಾಗ: ಕೋಣ ಬಿಡಲು 6 ನಿಮಿಷ.
ಸಮಿತಿ ಸಭೆಯಲ್ಲಿ ತೀರ್ಪುಗಾರರ ತೀರ್ಪೇ ಅಂತಿಮ ಎಂದು ಘೋಷಿಸಲಾಗಿದ್ದು, ಯಾವುದೇ ಕಾರಣಕ್ಕೂ ತೀರ್ಪನ್ನು ಪ್ರಶ್ನಿಸಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
ಹೊಸ ನಿಯಮಗಳೊಂದಿಗೆ ಈ ವರ್ಷದ ಕಂಬಳ ಕ್ರೀಡೆಯಲ್ಲಿ ಹೆಚ್ಚಿನ ಶಿಸ್ತು ಮತ್ತು ಪಾರದರ್ಶಕತೆ ಜಾರಿಯಾಗಲಿದೆ ಎಂದು ಕಂಬಳ ಸಮಿತಿ ತಿಳಿಸಿದೆ.

