ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಸಿದ್ಧ ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಇಂದು ಭೋಗಿ ಹಬ್ಬವಾಗಿರುವುದರಿಂದ ಮುಂಜಾನೆಯಲ್ಲೇ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಳೆಗಟ್ಟಿದೆ.
ಕಬ್ಬು, ಎಳ್ಳು, ಬೆಲ್ಲ ಸೇರಿದಂತೆ ಸಂಕ್ರಾಂತಿಗೆ ಅಗತ್ಯವಿರುವ ವಸ್ತುಗಳ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ವ್ಯಾಪಾರ ಮತ್ತು ವಹಿವಾಟು ಗಣನೀಯವಾಗಿ ಹೆಚ್ಚಾಗಿದ್ದು, ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 3–4 ಗಂಟೆಯಿಂದಲೇ ಜನರು ಕೆಆರ್ ಮಾರುಕಟ್ಟೆಯತ್ತ ಹರಿದು ಬರುತ್ತಿದ್ದು, ಅವೆನ್ಯೂ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಕೆಲವು ವಸ್ತುಗಳ ಬೆಲೆಗಳು ದುಪ್ಪಟ್ಟಾಗಿದ್ದರೂ, ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಉತ್ಸಾಹದಲ್ಲಿ ಜನರು ಖರೀದಿಗೆ ಮುಂದಾಗಿದ್ದಾರೆ.
ಹಬ್ಬದ ಸಂಭ್ರಮದ ನಡುವೆ ಮಾರುಕಟ್ಟೆ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ಇಂದು ಹಾಗೂ ನಾಳೆಯೂ ವಾಹನ ಸಂಚಾರ ದಟ್ಟವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.

