Mangaluru: ಎಡೆಬಿಡದೆ ಸುರಿದ ವಿಪರೀತ ಮಳೆಗೆ ಎರಡು ಮನೆಗಳಿಗೆ ಗುಡ್ಡ ಜರಿದು ಬಿದ್ದ ಪರಿಣಾಮ ಓರ್ವ ಮಹಿಳೆ ಮೃತ ಪಟ್ಟ ಘಟನೆ ತಾಲೂಕಿನ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಂಟೆ ಪದವು ಸಮೀಪದ ಕೋಡಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಮೃತ ಮಹಿಳೆಯನ್ನು ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ (50) ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು,ಕಾಂತಪ್ಪ ಪೂಜಾರಿ ಅವರ ಕುಟುಂಬ ಮಲಗಿದ್ದ ಕೊಠಡಿಯ ಭಾಗಕ್ಕೆ ಗುಡ್ಡ ಜರಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಕಾಂತಪ್ಪ ಪೂಜಾರಿ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಗುಡ್ಡ ಕುಸಿದು ಬಿದ್ದ ತೀವ್ರತೆಗೆ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪುತ್ರ ಸೀತಾರಾಮರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಪುಟ್ಟ ಮಕ್ಕಳು( 3 ಹಾಗೂ 2 ವರ್ಷದ ಮಕ್ಕಳು) ಕುಸಿದ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಕಾಂತಪ್ಪ ಹಾಗೂ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್ ಮತ್ತಿತರರು ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕರುಳು ಹಿಂಡುವ ವಿಡಿಯೋ :
ಗುಡ್ಡ ಕುಸಿತದಿಂದ ತಾಯಿ ಹಾಗೂ ಇಬ್ಬರು ಮಕ್ಕಳು ಅವಶೇಷಗಳಡಿ ಸಿಲುಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ತಾಯಿ ಮಗುವನ್ನು ತಬ್ಬಿಕೊಂಡಿದ್ದಾಳೆ. ಒಂದು ಮಗು ಎರಡೂ ಕೈಗಳನ್ನು ಅಲ್ಲಾಡಿಸುತ್ತಿದೆ. ಇತ್ತ ತಾಯಿ ರಕ್ಷಣೆಗಾಗಿ ಕೂಗುತ್ತಿದ್ದಾಳೆ. ಅದರ ಪಕ್ಕದಲ್ಲೇ ಇನ್ನೊಂದು ಮಗು ಮಲಗಿದೆ. ಈ ವಿಡಿಯೋ ಹೃದಯ ವಿದ್ರಾವಕವಾಗಿದ್ದು, ನೋಡುಗರ ಕರುಳು ಹಿಂಡುತ್ತಿದೆ.

