ಬೆಂಗಳೂರು, ಫೆಬ್ರವರಿ 08:ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಪ್ರಯಾಣಿಕರ ಆಕ್ರೋಶ ಒಂದು ಕಡೆ ತೀವ್ರವಾಗುತ್ತಿದ್ದರೆ, ಇನ್ನೊಂದು ಕಡೆ ರಾಜಕೀಯ ಕೆಸರೆರೆಚಾಟಗಳು ಜೋರಾಗಿವೆ. ಈ ಎಲ್ಲ ಚರ್ಚೆಗಳ ನಡುವೆ ನಾಳೆಯಿಂದಲೇ ಮೆಟ್ರೋ ಟಿಕೆಟ್ ದರ ಏರಿಕೆ ಜಾರಿಯಾಗುವುದು ಖಚಿತ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸ್ಪಷ್ಟಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ BMRCL ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಅಧಿಸೂಚನೆ ಬಂದಿಲ್ಲ. ಹೀಗಾಗಿ ದರ ಏರಿಕೆಗೆ ಸದ್ಯ ತಡೆಯಿಲ್ಲ ಎಂದರು. ತುರ್ತಾಗಿ ದರ ಏರಿಕೆ ಸ್ಥಗಿತಗೊಳಿಸುವಂತೆ ಆದೇಶ ಬಂದರೆ ಮಾತ್ರ ಈ ನಿರ್ಧಾರಕ್ಕೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದರು.
ಇತ್ತ, ಸೋಮವಾರದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗುವುದಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಕಟ್ಟರ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ BMRCL ಅಧಿಕಾರಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ನಮಗೆ ಲಭ್ಯವಾಗಿಲ್ಲ. ಮಾಹಿತಿ ಬಂದ ಬಳಿಕವೇ ದರ ಇಳಿಕೆ ಅಥವಾ ಬದಲಾವಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನೂ ಒಂದು ವೇಳೆ ನಾಳೆಯಿಂದ ದರ ಏರಿಕೆಗೆ ಬ್ರೇಕ್ ಬಿದ್ದರೂ, ಅದು ಕೇವಲ ತಾತ್ಕಾಲಿಕ ಅವಧಿಗೆ ಮಾತ್ರ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ವಾರ್ಷಿಕವಾಗಿ ಶೇ.5ರಷ್ಟು ದರ ಏರಿಕೆ ಮಾಡದಿದ್ದರೆ, ಮುಂದಿನ ವರ್ಷ ಶೇ.10ರಷ್ಟು ಏರಿಕೆ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು BMRCL ಅಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ಈ ನಡುವೆ, ಫೆಬ್ರವರಿ 9ರಿಂದ ಟಿಕೆಟ್ ದರ ಏರಿಕೆ ಹಿನ್ನೆಲೆ ಬೆಂಗಳೂರಿನ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಕೋರಿ ಪೊಲೀಸರಿಗೆ ಪತ್ರ ಬರೆಯಲಾಗಿದೆ. ದರ ಏರಿಕೆ ವಿರೋಧಿಸಿ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವಾಗಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಭದ್ರತೆ ಒದಗಿಸುವಂತೆ ಶಂಕರಪುರಂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ. ಫೆಬ್ರವರಿ 9ರಿಂದ 11ರವರೆಗೆ ಮೆಟ್ರೋ ನಿಲ್ದಾಣದ ಒಳಗೂ ಹೊರಗೂ ಪೊಲೀಸ್ ಭದ್ರತೆ ನೀಡುವಂತೆ ಬೇಡಿಕೆ ಇಡಲಾಗಿದೆ.

