ಚಾಮರಾಜನಗರ, ಜನವರಿ 30: ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ಮದುಮಗನ ಮೇಲೆ ದುಷ್ಕರ್ಮಿಗಳು ಚಾಕು ಇರಿದು ಹಲ್ಲೆ ನಡೆಸಿದ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕುಣಗಳ್ಳಿ ಗ್ರಾಮದ ಎಲ್.ರವೀಶ್ (34) ಚಾಕು ಇರಿತಕ್ಕೊಳಗಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲ್.ರವೀಶ್‌ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿದ್ದು, ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆರತಕ್ಷತೆಗೆ ತಮ್ಮ ಗ್ರಾಮದಿಂದ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ರಸ್ತೆಯ ಬಳಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವೇಳೆ ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಲಾಗಿದ್ದು, ಎಡಗೈ ತೋಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರವೀಶ್, “ಆರು ತಿಂಗಳ ಹಿಂದೆ ನನ್ನ ಎಂಗೇಜ್ಮೆಂಟ್ ನಡೆದಿತ್ತು. ಜ.30ರಂದು ಮದುವೆ ನಿಶ್ಚಯವಾಗಿದ್ದರಿಂದ ಕಲ್ಯಾಣ ಮಂಟಪಕ್ಕೆ ತೆರಳುವಾಗ ಹಿಂಬದಿಯಿಂದ ಬಂದ ಮತ್ತೊಂದು ಕಾರಿನಲ್ಲಿದ್ದವರು ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದರು. ಹಲ್ಲೆ ಮಾಡಿದವರು ಯಾರು ಎಂಬುದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ರವೀಶ್ ಅವರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

