ಬೆಂಗಳೂರು : ರಾಜ್ಯದಲ್ಲಿ 13,00,000ಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ ಎಂದು ತಿಳಿದುಬಂದಿದ್ದು, ಅವುಗಳನ್ನ ಪರಿಷ್ಕರಣೆ ಮಾಡಲಾಗುವುದು. ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲು ಸೆಪ್ಟೆಂಬರ್ ತಿಂಗಳಿನಿಂದ ವೆಬ್‌ಸೈಟ್ ಮುಕ್ತ ಆಗಿಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ವಿಧಾನಸಭೆಯಲ್ಲಿ ತಿಳಿಸಿದರು
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭಕ್ಕೆ ಅನುಕೂಲ ಆಗಲು ಪಡಿತರ ಕಾರ್ಡ್ ನೀಡುವ ಸಲುವಾಗಿ ಪ್ರತ್ಯೇಕ ಪೋರ್ಟಲ್ ಆರಂಭ ಮಾಡಲಾಗುತ್ತಿದೆ. ಇನ್ಮುಂದೆ 24 ಗಂಟೆಯ ಒಳಗೆ ವೈದ್ಯಕೀಯ ಚಿಕಿತ್ಸೆಗೆ ಪಡಿತರ ಚೀಟಿಗಳನ್ನು ನೀಡುವಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 25 ಲಕ್ಷ ಎಪಿಎಲ್ ಕಾರ್ಡ್‌ದಾರರಿದ್ದು, 1 ಲಕ್ಷ ಜನ ಅಕ್ಕಿ ಪಡೆಯುತ್ತಿರಲಿಲ್ಲ. ಆದ್ದರಿಂದ ಎಪಿಎಲ್ ಕಾರ್ಡ್‌ಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಒಟ್ಟು ಕಾರ್ಡ್‌ದಾರರ ಪೈಕಿ ಶೇಕಡ 75ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಶೇಕಡ 50ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ ಎಂದು ಹೇಳಿದರು. ಅಲ್ಲದೆ, ಕಾರ್ಡ್‌ಗಳನ್ನಾಧರಿಸಿ ನೋಡೋದಾದ್ರೆ, ಮಹಾರಾಷ್ಟ್ರಕ್ಕಿಂತ ಹೆಚ್ಚು ಬಡತನದ ರಾಜ್ಯ ಕರ್ನಾಟಕ ಎಂದಂತಾಗಲಿದೆ. ಬಿಪಿಎಲ್ ಪಟ್ಟಿಯಲ್ಲಿ 13 ಲಕ್ಷ ಜನ ಅನರ್ಹರು ಇದ್ದಾರೆ. ಅಂತಹರ ಕಾರ್ಡ್‌ಗಳನ್ನು ರದ್ದುಪಡಿಸಲು ಪ್ರಯತ್ನಿಸಿದಾಗ ಗೊಂದಲಗಳು ಸೃಷ್ಟಿಯಾದವು. ಆದ್ದರಿಂದ ಇದೀಗ ಕೈಗೊಂಡಿರುವ ಈ ಮಹತ್ವದ ಕೆಲಸಕ್ಕೆ ಎಲ್ಲಾ ಪಕ್ಷಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

