ಮುಂಬೈ: ಮಹಾನಗರಿ ಮುಂಬೈನಲ್ಲಿ ಕಳೆದು ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಖ್ಯಾತ ಬಾಲಿವುಡ್ ನಟ, ನಟಿಯರ ಮನೆ ಜಲಾವೃತಗೊಂಡಿವೆ. ಬುಧವಾರ ಕೂಡ ಮುಂಬೈನಲ್ಲಿ ಭಾರೀ ಮಳೆಯಾಗಿದ್ದು, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಧಾರಾಕಾರ ಮಳೆಯಿಂದಾಗಿ ಬಾಲಿವುಡ್ ಸೆಲೆಬ್ರೆಟಿಗಳ ಮನೆಗೂ ನೀರು ನುಗ್ಗಿದೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ.
ಈ ಕುರಿತು ವ್ಲಾಗರ್ ಓರ್ವ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜುಹುವಿನಲ್ಲಿರುವ ಅಮಿತಾಬ್ ಬಚ್ಚನ್ ಅವರ ಎರಡನೇ ಮನೆಯಾದ `ಪ್ರತೀಕ್ಷಾ’ದ ಹೊರಗೆ ಕೆಸರು ತುಂಬಿಕೊಂಡಿದೆ. ಸ್ವತಃ ಅಮಿತಾಬ್ ಬಚ್ಚನ್ ಅವರೇ ವೈಪರ್‌ನಿಂದ ನೆಲ ಒರೆಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಎಷ್ಟೇ ಶ್ರೀಮಂತರಾಗಿದ್ದರೂ, ಮುಂಬೈ ಮಳೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

