Mysuru : ಮೈಸೂರಿಗೆ ಹೋದ್ರೆ ಅರಮನೆ ನೋಡ್ದೆ ಯಾರೂ ವಾಸಪ್ ಬರಲ್ಲ. ಒಂದ್ವೇಳೆ ಮಿಸ್ ಆದ್ರೆ ಅಯ್ಯೋ ನೋಡ್ಲಿಲ್ಲ ಅನ್ನೋ ಗಿಲ್ಟ್ ಪೀಲಿಂಗ್ ನಲ್ಲಿ ಇರ್ತಾರೆ.. ಆದ್ರೆ ಇದಕ್ಕಿಂತ ಹೆಚ್ಚಾಗಿ ಅಲ್ಲಿರೋ ಮತ್ತೊಂದು ಭವ್ಯ, ಸುಂದರ ಮನೆಯನ್ನ ನೋಡ್ದೆ ಖಂಡಿತ ಯಾರು ಬರಲ್ಲ.. ಅರಮನೆ ಮಿಸ್ ಆಗ್ಬೋದು ಆದ್ರೆ ಈ ಮನೆ ಮಾತ್ರ ಮಿಸ್ ಮಾಡಲ್ಲ.. ಅರೆ ಯಾವ್ದು ಆ ಮನೆ ಅಂತೀರ ನಾವ್ ತೋರಿಸ್ತೀವಿ ನೋಡಿ..
ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಇಲ್ಲಿರುವ ಅರಮನೆಗಳು, ಕಟ್ಟಡಗಳು, ರಸ್ತೆಗಳು, ವೃತ್ತಗಳು, ಪ್ರತಿಮೆಗಳು, ದೇವಸ್ಥಾನಗಳು ಹೀಗೆ ಎಲ್ಲವೂ ಇತಿಹಾಸದ ಕಥೆಗಳನ್ನು ಹೇಳಲು ನಿಂತಿವೆಯೇನೋ? ಎಂಬಂತೆ ಭಾಸವಾಗುತ್ತವೆ. ಅಷ್ಟೇ ಅಲ್ಲದೆ ಇಲ್ಲಿರುವ ಪ್ರತಿಯೊಂದು ಕಟ್ಟಡಕ್ಕೂ ತನ್ನದೇ ಆದ ಇತಿಹಾಸವಿರುವುದು ಗೋಚರಿಸುತ್ತದೆ. ಇವತ್ತಿನ ಅಭಿವೃದ್ಧಿಯ ಕಲ್ಪನೆ ಅಂದೇ ಮಹಾರಾಜರಿಗಿತ್ತು. ಹೀಗಾಗಿಯೇ ವಿಶಾಲವಾದ ರಸ್ತೆ, ಮತ್ತು ಅದರ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸಿದ್ದರು. ಇವತ್ತು ಮೈಸೂರು ಪ್ರವಾಸಿಗರಿಗೆ ಇಷ್ಟವಾಗುತ್ತಿದ್ದರೆ ಅದಕ್ಕೆ ಮಹರಾಜರುಗಳೇ ಕಾರಣರಾಗಿದ್ದಾರೆ.
ಇವತ್ತಿಗೂ ದೂರದಿಂದ ಬರುವ ಪ್ರವಾಸಿಗರು ಅರಮನೆಗೆ ಪ್ರವೇಶ ಪಡೆಯುವ ವೇಳೆ ಅಥವಾ ಅರಮನೆಗೆ ಸುತ್ತು ಹೊಡೆಯುವ ವೇಳೆ ಅರಮನೆಯಿಂದ ಹೊರಗೆ ಮಾರಮ್ಮ ದೇಗುಲದ ಎದುರಿಗೆ ನಂಜನಗೂಡು ರಸ್ತೆಯಲ್ಲಿರುವ ಕಟ್ಟಡವೊಂದು ಎಲ್ಲರ ಗಮನಸೆಳೆಯುತ್ತದೆ. ಕೆಲವರು ಈ ಕಟ್ಟಡದ ಬಗ್ಗೆ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಈ ಕಟ್ಟಡ ಮೈಸೂರಿಗರಿಗೆ ಚಿರಪರಿಚಿತ. ಈ ಕಟ್ಟಡದ ಹೆಸರು ಹೇಳಿಯೇ ಸುತ್ತಲಿನ ಪರಿಚಯ ಮಾಡಿಕೊಳ್ಳುತ್ತಾರೆ. ಪ್ರತಿದಿನವೂ ಈ ಕಟ್ಟಡದ ಹೆಸರು ಜನ ವಲಯದಲ್ಲಿ ಕೇಳಿರುತ್ತದೆ.
ಎಲ್ಲರ ಕುತೂಹಲ ಕೆರಳಿಸುವ ಈ ಕಟ್ಟಡದ ಹೆಸರೇ ಗನ್ ಹೌಸ್ .. ಇದೊಂದು ಪಾರಂಪರಿಕ ಕಟ್ಟಡವಾಗಿದ್ದು, ಎಲ್ಲರನ್ನು ಆಕರ್ಷಿಸುತ್ತದೆ. ರಾಜರ ಕಾಲದಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿಡಲು ಕಟ್ಟಲಾಗಿದ್ದ ಕಟ್ಟಡವಾಗಿದ್ದು, ಮದ್ದಿನ ಮನೆ ಅರ್ಥಾತ್ ಗನ್ ಹೌಸ್ ಎಂದೇ ಕರೆಯಲ್ಪಡುತ್ತಿದೆ. ಇವತ್ತು ಇದು ಹಾಗೆಯೇ ಉಳಿದು ಹೋಗಿದೆ. ಈ ಸುಂದರ ಕಟ್ಟಡದ ಇತಿಹಾಸ ಕೆದಕಿದರೆ 1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಕಟ್ಟಡವನ್ನು ನಿರ್ಮಿಸಿದರು ಎಂಬುದು ತಿಳಿದು ಬಂದಿದೆ..
ಇದು ರಾಜವಂಶಸ್ಥರ ಖಾಸಗಿ ಆಸ್ತಿ ಆಗಿದೆ.. ನೋಡಲು ಆಕರ್ಷಣೀಯವಾಗಿರುವ ಈ ಕಟ್ಟಡವು ಮೈಸೂರಿನ ಪಾರಂಪರಿಕತೆಯನ್ನು ಸಾರಿ ಹೇಳುತ್ತದೆ. ಅವತ್ತಿನ ಕಾಲದಲ್ಲಿ ಮಹಾರಾಜರು ಯುದ್ದ ಸಾಮಗ್ರಿ, ಮದ್ದುಗುಂಡುಗಳನ್ನು ಶೇಖರಿಸಿಡಲು ಈ ಕಟ್ಟಡವನ್ನು ಬಳಸುತ್ತಿದ್ದರು. ಈ ಕಟ್ಟಡವು ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ನಡುವೆ ಸ್ಥಾನ ಪಡೆದಿದ್ದು, ರಾಜವಂಶಸ್ಥರ ಖಾಸಗಿ ಆಸ್ತಿಯಾಗಿದೆ. ಪಾರಂಪರಿಕ ಕಟ್ಟಡಗಳು ಖಾಸಗಿ ಒಡೆತನದಲ್ಲಿದ್ದರೂ ಅವುಗಳನ್ನು ಪರಭಾರೆ ಮಾಡುವುದಾಗಲಿ ಅಥವಾ ಅದರ ಮೂಲ ವಿನ್ಯಾಸಕ್ಕೆ ಧಕ್ಕೆ ತರುವಂತಹ ಕಾರ್ಯದ ಮೇಲೆ ಶಾಶ್ವತ ನಿರ್ಬಂಧವಿದೆ. ಹೀಗಾಗಿ ಇದು ಈಗಲೂ ಹೇಗಿತ್ತೋ ಹಾಗೆಯೇ ಉಳಿದುಕೊಂಡಿದೆ.
ಈ ಹಿಂದೆ ಈ ಕಟ್ಟಡದಲ್ಲಿ ಹೋಟೆಲ್ ನಡೆಯುತ್ತಿತ್ತಾದರೂ ಈಗ ಖಾಲಿಯಿದೆ. ಇದರಿಂದ ಈ ಸುಂದರ ಕಟ್ಟಡ ಇವತ್ತು ಪಾಳು ಬಿದ್ದ ಕಟ್ಟಡದಂತೆ ಕಂಡು ಬರುತ್ತದೆ. ಕೆಲವು ವರ್ಷಗಳ ಹಿಂದೆ ಕಾಮಗಾರಿ ನಡೆಸುವಾಗ ಇಲ್ಲಿ ಆಳವಾದ ಬಾವಿಗಳು ದೊರೆತಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲ ಇದರ ಮಹತ್ವಕ್ಕೂ ಸಾಕ್ಷಿಯಾಗಿದೆ. ಈ ಬಾವಿಗಳು ಮಹಾರಾಜರ ಕಾಲದಲ್ಲಿ ನಿರ್ಮಿಸಿರ ಬಹುದೆಂದು ಹೇಳಲಾಗುತ್ತಿತ್ತು.
ದೇಶ ವಿದೇಶದಿಂದ ಬರುವ ಪ್ರವಾಸಿಗರು ಅರಮನೆಯನ್ನು ವೀಕ್ಷಿಸಿದ ನಂತರ ಹೊರ ಬಂದ ಬಳಿಕ ಎದುರಿಗೆ ಕಾಣುವ ಸುಂದರ ಮತ್ತು ಆಕರ್ಷಣೀಯ ವಾಗಿರುವ ಪಾರಂಪರಿಕತೆಯನ್ನು ಎತ್ತಿ ತೋರಿಸುವಂತಿರುವ ಈ ಕಟ್ಟಡದತ್ತ ಕುತೂಹಲದ ನೋಟ ಬೀರುತ್ತಾರೆ. ಅಷ್ಟೇ ಅಲ್ಲದೆ ಏನಿರಬಹುದೆಂದು ನೋಡುವ ತವಕದಿಂದ ಇತ್ತ ಬರುತ್ತಾರೆ. ಆದರೆ ಪಾಳು ಬಂಗಲೆಯಂತೆ ಜನರಿಲ್ಲದ, ಶುಚಿತ್ವವೂ ಇಲ್ಲದ ಈ ಕಟ್ಟಡವನ್ನು ನೋಡಿ ಸಪ್ಪೆ ಮೋರೆ ಮಾಡಿಕೊಂಡು ಹಿಂತಿರುಗುತ್ತಾರೆ.
ಕೆಲ ವರ್ಷಗಳ ಹಿಂದೆ ದಸರಾ ಸಂದರ್ಭ ಈ ಕಟ್ಟಡದ ಆವರಣದಲ್ಲಿ ಖಾಸಗಿಯಾಗಿ ಆಹಾರ ಮೇಳ ನಡೆದಿದ್ದು ಬಿಟ್ಟರೆ, ಈ ಕಟ್ಟಡದ ಸುತ್ತ ಸದಾ ಮೌನವೇ ಆವರಿಸಿರುತ್ತದೆ. ಕೆಲ ವರ್ಷಗಳ ಹಿಂದೆ ಗನ್ ಹೌಸ್, ಬಿಲ್ಡಿಂಗ್ ಇಂಪಿರಿಯಲ್ ಹೋಟೆಲ್ ಆಗಿ ಪುನರ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದರು. ಅಲ್ಲದೆ, ಈ ಗನ್ ಹೌಸ್ ಅನ್ನು ಪ್ರತಿಷ್ಠಿತ ಹೋಟೆಲ್ ಉದ್ಯಮಕ್ಕೆ ತೊಡಗಿಸಬೇಕೆಂಬುದು ಶ್ರೀಕಂಠದತ್ತ ಒಡೆಯರ್ ಅವರ ಕನಸಾಗಿತ್ತು ಎಂದಿದ್ದರು. ಆದರೆ ಅದು ಇದುವರೆಗೆ ಕೈಗೂಡಿಲ್ಲ.
ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ನಡುವೆ ಗನ್ ಹೌಸ್ ಕಟ್ಟಡ ವಿಶೇಷವಾಗಿ ಗಮನಸೆಳೆಯುತ್ತಿದ್ದು, ಇದನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ತೆರೆದಿಡಬಹುದು. ಇದೀಗ ಈ ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಅದನ್ನು ಬೀಳಿಸಿ ಅನೈತಿಕ ಚಟುವಟಿಕೆ ನಡೆಸುವವರಿಗೆ, ಕಸ ಸುರಿದು ಅನೈರ್ಮಲ್ಯವನ್ನುಂಟು ಮಾಡುವವರಿಗೆ ಕೊರತೆಯಿಲ್ಲ. ಇನ್ನು ನಗರದಲ್ಲಿ ಪ್ರತಿಭಟನೆ ಇನ್ನಿತರ ಹೆಚ್ಚಿನ ಚಳವಳಿಗಳು ಈ ಕಟ್ಟಡದ ಮುಂಭಾಗದಿಂದಲೇ ಆರಂಭವಾಗುವುದು ವಿಶೇಷವಾಗಿದೆ. ಅದು ಏನೇ ಇರಲಿ ಗನ್ ಹೌಸ್ ಆಕರ್ಷಣೀಯ ಕಟ್ಟಡ ಎನ್ನುವುದರಲ್ಲಿ ಎರಡು ಮಾತಿಲ್ಲ.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

