ಮೈಸೂರು: ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ನವೀಕರಣ ವೇಳೆಯಲ್ಲೇ ಮತ್ತೆ ಕುಸಿತಗೊಂಡ ಪರಿಣಾಮ ಓರ್ವ ಕಾರ್ಮಿಕ ಕೆಳಗೆ ಸಿಲುಕಿಕೊಂಡಿದ್ದು ಉಳಿದ 13 ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ಗೌಸಿಯಾನಗರದ ನಿವಾಸಿ ಸದ್ದಾಂ ಎಂಬ ಕಾರ್ಮಿಕ ಕೆಳಗೆ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.ಆತನನ್ನು ಸಂರಕ್ಷಿಸುವ ಕೆಲಸ ತ್ವರಿತವಾಗಿ ನಡೆಯುತ್ತಿದೆ.
ಮಂಗಳವಾರ (ಜ.28) ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಮಹಾರಾಣಿ ಪದವಿ ವಿಜ್ಞಾನ ಕಾಲೇಜು ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು, ಅದರ ದುರಸ್ತಿ ಕಾರ್ಯ ನಡೆಯುತ್ತಿತ್ತು. ದುರಸ್ತಿ ಕಾರ್ಯದಲ್ಲಿ ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಕಟ್ಟಡ ಕುಸಿದಿದೆ.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಮಿಕನ ರಕ್ಷಣೆಗೆ ಮುಂದಾಗಿದ್ದಾರೆ. ಮೂರು ಜೆಸಿಬಿ ಮೂಲಕ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2022ರ ಅಕ್ಟೋಬರ್ 21 ರಲ್ಲಿ ಸಂಪೂರ್ಣ ಕಟ್ಟಡದ ಮೇಲ್ಛಾವಣಿ ಕುಸಿತಗೊಂಡಿತ್ತು. ಇದಾದ ಬಳಿಕ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರಂಪರಿಕ ತಜ್ಞರ ಸಮಿತಿ ವರದಿ ಅನ್ವಯ ಅದರ ಪುನರ್ ನವೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.
ಇದರ ಭಾಗವಾಗಿ ಇಂದು ಮೂವರು ಕಾರ್ಮಿಕರು ಸಂಪೂರ್ಣ ಸ್ವಚ್ಛಗೊಳಿಸಿ ತಾರಸಿ ನಿರ್ಮಿಸಲು ತಯಾರಿ ನಡೆಸಿದ್ದ ವೇಳೆ ಅವಘಡ ಸಂಭವಿಸಿದೆ. ಅದೃಷ್ಠವಶಾತ್ ಇಬ್ಬರು ಪಾರಾಗಿದ್ದು, ಓರ್ವ ಕಾರ್ಮಿಕ ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗಿದೆ.

