ಬಿಹಾರ : ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ತನ್ನ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದ್ದು, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿರೂಢ ಬಿಜೆಪಿ ಮತ್ತು ಜನತಾದಳ (ಯುನೈಟೆಡ್) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ (ಅ 12) ಘೋಷಿಸಿದ್ದಾರೆ.
ಈ ಒಪ್ಪಂದದ ಭಾಗವಾಗಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ತಿಳಿದುಬಂದಿದೆ.
ಸೀಟು ಹಂಚಿಕೆಯ ಸೂತ್ರವನ್ನು ಪ್ರಕಟಿಸಿದ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಹಾರ ಚುನಾವಣಾ ಉಸ್ತುವಾರಿ, ಕೇಂದ್ರದಲ್ಲಿ ಸಚಿವರಾಗಿರುವ ಪ್ರಧಾನ್, ಬಿಹಾರದ ಎನ್‌ಡಿಎ ಮಿತ್ರಪಕ್ಷಗಳು ಸೀಟು ಹಂಚಿಕೆಯನ್ನು ಸ್ವಾಗತಿಸಿವೆ ಮತ್ತು ಮಾತುಕತೆಗಳು ಸೌಹಾರ್ದಯುತವಾಗಿ ನಡೆದವು. ಬಿಹಾರ ಚುನಾವಣೆಗೆ ಸಿದ್ಧವಾಗಿದ್ದು, ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬರೆದುಕೊಂಡಿದ್ದಾರೆ.
ಟಿಕೆಟ್ ಹಂಚಿಕೆ ಸೂತ್ರ ಎನ್‌ಡಿಎ ಮಿತ್ರ ಪಕ್ಷಗಳ ನಡುವಿನ, ಅದರಲ್ಲೂ ವಿಶೇಷವಾಗಿ ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ಚಿರಾಗ್ ಪಾಸ್ವಾನ್ ನಡುವಿನ ಸೀಟು ಹಂಚಿಕೆ ಉದ್ವೇಗವನ್ನು ಕೊನೆಗೊಳಿಸಿದೆ, ಎರಡು ಪಕ್ಷಗಳು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬೆದರಿಕೆಯೊಡ್ಡಿದ್ದವು.
ಇಂದು ಬೆಳಿಗ್ಗೆ ದೆಹಲಿಯಲ್ಲಿ ನಡೆದ ಬಿಜೆಪಿಯ ವರಿಷ್ಟರೊಂದಿಗೆ ಮಾತುಕತೆ ನಡೆಸಿದ ನಂತರ ಮಾಂಝಿ ಎನ್‌ಡಿಎಯ ಸೀಟು ಹಂಚಿಕೆ ಸೂತ್ರದ ಕುರಿತು ಒಪ್ಪಂದಕ್ಕೆ ಬಂದರು. ಎಚ್‌ಎಎಂ ಆರು ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದವು, ಇದನ್ನು ಪ್ರಧಾನ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ. ಸೀಟು ಹಂಚಿಕೆ ಒಪ್ಪಂದದ ಜೊತೆ, HAMಗೆ ಮುಂದಿನ ದಿನಗಳಲ್ಲಿ ಒಂದು MLC ಸ್ಥಾನಕ್ಕೆ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

