ಕಠ್ಮಂಡು: ಟೇಕಾಫ್ ವೇಳೆ ಶೌರ್ಯ ಏರ್ ಲೈನ್ಸ್ ಗೆ ಸೇರಿದ ವಿಮಾನ(9N-AME (CRJ 200) )ವೊಂದು ಪತನವಾಗಿ 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನದಲ್ಲಿದ್ದ 19 ಮಂದಿ ಪೈಕಿ 18 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 13 ಜನರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಟೇಕ್‌ಆಫ್ ವೇಳೆ ಕ್ಯಾಬಿನ್ ಸಿಬ್ಬಂದಿ ಸೇರಿ ವಿಮಾನದಲ್ಲಿ 19 ಜನರಿದ್ದರು ಎಂದು ತಿಳಿದುಬಂದಿದೆ.
ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಮಾನ ಪೋಖರಾಗೆ ತೆರಳುತ್ತಿತ್ತು, ಈ ವೇಳೆ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಪೈಲಟ್ ಬಚಾವ್ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ವಿಮಾನವು ರನ್‌ವೇಯ ದಕ್ಷಿಣದ ತುದಿಯಿಂದ ಟೇಕಾಫ್ ಆಗುತ್ತಿದ್ದಾಗ, ರೆಕ್ಕೆಯ ತುದಿಯು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಇದ್ದಕ್ಕಿದ್ದಂತೆ ಪಲ್ಟಿಯಾಯಿತು. ತಕ್ಷಣವೇ ಬೆಂಕಿ ಹೊತ್ತಿಕೊಂಡ ವಿಮಾನವು ನಂತರ ರನ್‌ವೇಯ ಪೂರ್ವ ಭಾಗದಲ್ಲಿರುವ ಕಮರಿಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

