ನವದೆಹಲಿ ಭಾರತದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐನ ನಿಯಮಗಳಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಇನ್ಷೂರೆನ್ಸ್ , ಕ್ರೆಡಿಟ್ ಕಾರ್ಡ್ ಬಿಲ್ , ಷೇರು ಮಾರುಕಟ್ಟೆ ಮತ್ತು ಇತರ ದೊಡ್ಡ ಮೊತ್ತದ ವಹಿವಾಟುಗಳಿಗೆ ಒಂದೇ ಬಾರಿಗೆ 5 ಲಕ್ಷ ರೂ.ವರೆಗೆ ಮತ್ತು ದಿನಕ್ಕೆ 10 ಲಕ್ಷ ರೂ.ವರೆಗೆ ಪಾವತಿಸುವ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹೊಸ ನಿಯಮ ಸೆಪ್ಟೆಂಬರ್ 15 ಅನ್ವಯವಾಗಲಿದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಆ್ಯಪ್‌ಗಳ ಮೂಲಕ ದೊಡ್ಡ ಮೊತ್ತದ ಪಾವತಿ ಈಗ ಸುಲಭವಾಗಿದೆ.
ಇನ್ಷೂರೆನ್ಸ್ ಮತ್ತು ಸಾಲದ ಇಎಂಐ: ಇನ್ಷೂರೆನ್ಸ್ ಪ್ರೀಮಿಯಂ, ಸಾಲದ ಇಎಂಐ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗೆ ಒಮ್ಮೆಗೆ 5 ಲಕ್ಷ ರೂ.ವರೆಗೆ ಪಾವತಿಸಬಹುದು. ದಿನಕ್ಕೆ 10 ಲಕ್ಷ ರೂ.ವರೆಗೆ (ಇನ್ಷೂರೆನ್ಸ್ ಮತ್ತು ಇಎಂಐ) ಮತ್ತು 6 ಲಕ್ಷ ರೂ.ವರೆಗೆ (ಕ್ರೆಡಿಟ್ ಕಾರ್ಡ್) ಮಿತಿಯಿದೆ. ಈ ಹಿಂದೆ ದೊಡ್ಡ ಮೊತ್ತವನ್ನು ಸಣ್ಣ ಕಂತುಗಳಲ್ಲಿ ಪಾವತಿಸಬೇಕಿತ್ತು, ಆದರೆ ಈಗ ಒಂದೇ ಬಾರಿಗೆ ಸಾಧ್ಯವಿದೆ.
ಷೇರು ಮಾರುಕಟ್ಟೆ ವಹಿವಾಟು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ.ವರೆಗೆ ಪಾವತಿಸಬಹುದು, ದಿನಕ್ಕೆ 10 ಲಕ್ಷ ರೂ.ವರೆಗೆ ಮಿತಿಯಿದೆ. ಇದು ದೊಡ್ಡ ಹೂಡಿಕೆಗೆ ಸಹಾಯಕವಾಗಲಿದೆ.
ಪ್ರಯಾಣದ ಬುಕಿಂಗ್‌ಗೆ ಒಮ್ಮೆಗೆ 5 ಲಕ್ಷ ರೂ.ವರೆಗೆ ಮತ್ತು ದಿನಕ್ಕೆ 10 ಲಕ್ಷ ರೂ.ವರೆಗೆ ಪಾವತಿಸಬಹುದು. ಒಡವೆ ಖರೀದಿಗೆ ಒಂದೇ ಬಾರಿಗೆ 5 ಲಕ್ಷ ರೂ. ಮತ್ತು ದಿನಕ್ಕೆ 6 ಲಕ್ಷ ರೂ.ವರೆಗೆ ಮಿತಿಯಿದೆ. ವರ್ತಕರಿಗೆ ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ. ಪಾವತಿಗೆ ಅವಕಾಶವಿದೆ, ಆದರೆ ದೈನಂದಿನ ಮಿತಿಯನ್ನು ನಿಗದಿಪಡಿಸಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ (P2P) ಪಾವತಿಯ ಮಿತಿ 1 ಲಕ್ಷ ರೂ. ಆಗಿಯೇ ಉಳಿದಿದೆ. ಈ ವಿಭಾಗದಲ್ಲಿ ಯಾವುದೇ ಬದಲಾವಣೆಯಿಲ್ಲ.

