ಕೋಲಾರ: ಕೋಲಾರದಲ್ಲಿ ಪರಸ್ಪರ ಪ್ರೀತಿಸಿ ನಿನ್ನೆ ಬೆಳಗ್ಗೆ ಮದುವೆಯಾದ ನವಜೋಡಿ, ಅದೇ ದಿನ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಪರಿಣಾಮ ನವವಧು ಸಾವನ್ನಪ್ಪಿದ್ದಳು. ಇಂದು ಚಿಕಿತ್ಸೆ ಫಲಕಾರಿಯಾಗದೇ ವರನೂ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರದ ಬೈನಪಲ್ಲಿ ಗ್ರಾಮದ ಲಿಖಿತಾಶ್ರೀ (20) ಬುಧವಾರ ಕೋಲಾರದಲ್ಲಿ ಮೃತಪಟ್ಟಿದ್ದಳು. ಚಂಬರಸನಹಳ್ಳಿಯ ನವೀನ್ (28) ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಬುಧವಾರ ದಾಖಲಾಗಿದ್ದ ನವೀನ್ ನನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನವೀನ್ ಮತ್ತು ಲಿಖಿತಾಶ್ರೀ ಜೋಡಿ ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಬುಧವಾರ ಮುಂಜಾನೆ ಹಿರಿಯರ ಸಮ್ಮುಖದಲ್ಲಿ ಚಂಬರಸನಹಳ್ಳಿಯಲ್ಲಿ ಮದುವೆಯಾದರು. ಮದುವೆ ಕೆಲಗಂಟೆಗಳ ನಂತರ ನವಜೋಡಿ ರೂಮಿಗೆ ಹೋಗಿದ್ದಾರೆ. ಬಳಿಕ ಮಚ್ಚಿನಿಂದ ಪರಸ್ಪರರ ಮೇಲೆ ಹಲ್ಲೆ ನಡೆಸಿಕೊಂಡಿದ್ದಾರೆ. ಮಾರಾಮಾರಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಲಿಖಿತಾಶ್ರೀ ಸಾವನ್ನಪ್ಪಿದ್ದಳು. ನವೀನ್ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆತನನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವರನೂ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಬುಧವಾರ ಅಂಡರ್ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಬ್ಬರೂ ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಬೆಳಗಿನ ಜಾವ ಇಬ್ಬರಿಗೂ ಮದುವೆಯಾಗಿತ್ತು. ಮದುವೆ ನಂತರ ಇಬ್ಬರೂ ಮನೆಯ ಕೊಠಡಿಗೆ ಹೋಗಿದ್ದರು. ಕೆಲ ಹೊತ್ತಿನಲ್ಲೇ ಕೊಠಡಿಯಲ್ಲಿದ್ದ ನವಜೋಡಿ ಮಚ್ಚಿನಿಂದ ಹೊಡೆದಾಡಿಕೊಂಡಿದ್ದಾರೆ. ಇಬ್ಬರ ಗಲಾಟೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದರು.