ನವದೆಹಲಿ : 2022ರಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದೇ ಗುರುತಿಸಲಾಗಿರುವ ಅತೀಕ್ ಅಹ್ಮದ್ ನನ್ನು ಎನ್ ಐಎ ಬಂಧಿಸಿದೆ. ಈ ಪ್ರಕರಣದಲ್ಲಿ ಇತ ಈ ವರೆಗೆ ಬಂಧಿಸಿದ 21 ನೇ ಆರೋಪಿಯಾಗಿದ್ದಾನೆ.
ಅತೀಕ್, ಪಿಎಫ್‌ಐ ನಾಯಕತ್ವದ ಅಡಿಯಲ್ಲಿ, ಪ್ರಕರಣದ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿ ಸಹಾಯ ಮಾಡಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಜನರಲ್ಲಿ ಭಯ ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್‌ಐ ಅಜೆಂಡಾದ ಭಾಗವಾಗಿ ನಡೆಸಿದ ಕೊಲೆಯನ್ನು ಮುಸ್ತಫಾ ಯೋಜಿಸಿ ಕಾರ್ಯಗತಗೊಳಿಸಿದ್ದ ಎಂದು ಎನ್ಐಎ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಶರೀಫ್ ಪತ್ತೆಗೆ ಎನ್‌ಐಎ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಪ್ರವೀಣ್ ನೆಟ್ಟಾರು ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು. 2022ರ ಆಗಸ್ಟ್ 4ರಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ ಇದುವರೆಗೆ 20 ಆರೋಪಿಗಳನ್ನು ಬಂಧಿಸಿದೆ. ತಲೆಮರೆಸಿಕೊಂಡಿರುವ ಮೂವರು ಸೇರಿದಂತೆ ಒಟ್ಟು 23 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

