ಅಮೆರಿಕ, ಮಾರ್ಚ್ 29: ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಜನರ ಅಸಮಾಧಾನ ತೀವ್ರಗೊಂಡಿದ್ದು, ‘ನೋ ಕಿಂಗ್ಸ್’ ಹೆಸರಿನಲ್ಲಿ ದೇಶವ್ಯಾಪಿ ಪ್ರತಿಭಟನೆಗಳು ಜೋರಾಗಿವೆ. ಅಮೆರಿಕದ ಸುಮಾರು 50ಕ್ಕೂ ಹೆಚ್ಚು ನಗರಗಳಲ್ಲಿ ಜನರು ಬೀದಿಗಿಳಿದು ಟ್ರಂಪ್ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರು ಟ್ರಂಪ್ ಅವರ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಇರಾನ್ ವಿರುದ್ಧದ ಯುದ್ಧದ ಭೀತಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಾವಿರಾರು ಜನರು ಭಾಗವಹಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಪ್ರಮುಖ ನಗರಗಳಲ್ಲಿ ಭಾರಿ ಮೆರವಣಿಗೆಗಳು ನಡೆದಿದ್ದು, ಹಲವೆಡೆ ಸಣ್ಣ ಸಭೆಗಳು ಕೂಡ ನಡೆಯಿತು. ಪ್ರತಿಭಟನಾಕಾರರು ಫಲಕಗಳನ್ನು ಹಿಡಿದುಕೊಂಡು, ಘೋಷಣೆಗಳನ್ನು ಕೂಗುತ್ತಾ ಹಾಗೂ ನೃತ್ಯ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಈ ಪ್ರತಿಭಟನೆಗಳು ನಡೆದಿದ್ದು, ಇದು ದೇಶದಾದ್ಯಂತ ಜನರ ಅಸಮಾಧಾನ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.
ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸಿ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವಂತೆ ಟ್ರಂಪ್ ಆಡಳಿತವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.

