ನವದೆಹಲಿ : ವೆನೆಜುವೆಲಾದ ಜನರ ಪರವಾದ ಹೋರಾಟಕ್ಕಾಗಿ ಮರಿಯಾ ಕೊರಿನಾ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದೆ.
ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೊಡಿಸುವ ಸಲುವಾಗಿ ಅವರ ದಣಿವರಿಯದ ಕೆಲಸ ಮತ್ತು ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರ ಹೋರಾಟಕ್ಕಾಗಿ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಚಾಡೊ ಅವರು 20 ವರ್ಷಗಳ ಹಿಂದೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ಧ್ವನಿಯೆತ್ತಿದರು. ಅಂದಿನಿಂದ ಅವರು ಜನರ ಪರವಾಗಿ ನಿಂತಿದ್ದಾರೆ.
ಟ್ರಂಪ್ ನೊಬೆಲ್ ಕನಸು ಭಗ್ನ
ಈ ಬಾರಿಯ ರೇಸ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸೇರಿಕೊಂಡಿದ್ದರು. ತಮಗೇ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂದು ಅವಕಾಶ ಸಿಕ್ಕಾಗಲೆಲ್ಲ ಘೋಷಿಸಿಕೊಳ್ಳುತ್ತಿದ್ದ ಟ್ರಂಪ್ ಅವರಿಗೆ ಭಾರೀ ನಿರಾಸೆಯಾಗಿದೆ. ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಸ್ವತಃ ತಾವೇ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಘೋಷಿಸಿಕೊಂಡಿದ್ದರು.
ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷ ಸೇರಿದಂತೆ ಹಲವು ಜಾಗತಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ ನಾನು ಮುಖ್ಯ ಪಾತ್ರ ವಹಿಸಿದ್ದೇನೆ ಎಂದು ಅವರು ಹೇಳಿದ್ದರು. ಇಸ್ರೇಲ್, ಥೈಲ್ಯಾಂಡ್, ಕಾಂಬೋಡಿಯಾ, ಅಜೆರ್ಬೈಜಾನ್, ಅರ್ಮೇನಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ರಾಷ್ಟ್ರಗಳು 2025ರ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಟ್ರಂಪ್ ಅವರನ್ನು ಬೆಂಬಲಿಸಿದ್ದವು.
“ಕೇವಲ 7 ತಿಂಗಳಲ್ಲಿ, ನಾನು 7 ಅಂತ್ಯವಿಲ್ಲದ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಇಲ್ಲದಿದ್ದರೆ ಇನ್ನಷ್ಟು ಪ್ರಾಣಗಳು ಬಲಿಯಾಗುತ್ತಿದ್ದವು. ಹೀಗಾಗಿ, ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು” ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.

