ದೊಡ್ಡಬಳ್ಳಾಪುರ, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ಪ್ರದೇಶದಲ್ಲಿ ವಿಮಾನ ಮಾದರಿಯ ಡ್ರೋನ್ ಒಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಖಾಲಿ ಜಮೀನಿನಲ್ಲಿ ಬಿದ್ದಿದ್ದ ಡ್ರೋನ್ ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಡ್ರೋನ್‌ನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ತಜ್ಞರಿಂದ ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ, ಥರ್ಮಕೋಲ್ ಬಳಸಿ ವಿಮಾನ ಮಾದರಿಯಲ್ಲಿ ಈ ಡ್ರೋನ್‌ನ್ನು ರಚಿಸಲಾಗಿದ್ದು, ಅದರೊಳಗೆ ಬ್ಯಾಟರಿಗಳು ಹಾಗೂ ಎಲೆಕ್ಟ್ರಿಕ್ ವೈರ್‌ಗಳು ಅಳವಡಿಸಿರುವುದು ಕಂಡುಬಂದಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಡ್ರೋನ್ ಹಾರಿಸಿದ್ದು, ಹಾರಾಟದ ವೇಳೆ ಸಂಪರ್ಕ ಕಡಿತಗೊಂಡು ಅದು ನೆಲಕ್ಕೆ ಬಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಡ್ರೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸಾರ್ವಜನಿಕರಿಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

