ನವದೆಹಲಿ : ಭಾರತದ ವಿವಿಧೆಡೆ ರೈಲು ಹಳಿ, ಗ್ಯಾಸ್ ಪೈಪ್ಲೈನ್ಗಳ ಮೇಲೆ ಸ್ಲೀಪರ್ ಸೆಲ್ಗಳ ಮೂಲಕ ದಾಳಿ ನಡೆಸುವುದಾಗಿ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚುಕೋರ ಪಾಕಿಸ್ತಾನಿ ಉಗ್ರ ಫರ್ಹತುಲ್ಲಾ ಘೋರಿ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಮುಂಬೈ, ದೆಹಲಿ ಸೇರಿ ಮಹಾನಗರಗಳಲ್ಲಿ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಘೋರಿ ವಿಡಿಯೋದಲ್ಲಿ ಸ್ಲೀಪರ್ ಸೆಲ್ಗಳಿಗೆ ಕರೆ ಕೊಟ್ಟಿದ್ದಾನೆ.ಭಾರತ ಸರ್ಕಾರ ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮೂಲಕ ಸ್ಲೀಪರ್ ಸೆಲ್ಗಳ ಆಸ್ತಿ ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೆ ಭಾರತದ ಪೆಟ್ರೋಲಿಯಂ ಪೈಪ್ಲೈನ್ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಘೋರಿ ಹೇಳಿದ್ದಾನೆ. ಬೆದರಿಕೆ ವಿಡಿಯೋ 3 ವಾರಗಳ ಹಿಂದೆ ಟೆಲಿಗ್ರಾಮ್ಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಈ ವಿಡಿಯೋ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಯಾವುದೇ ಮಾಹಿತಿ ಖಚಿತಪಡಿಸಿಲ್ಲ. ಆದರೂ, ಟೆಲಿಗ್ರಾಂನಲ್ಲಿ ಬಿಡುಗಡೆಯಾಗಿರುವ 3 ನಿಮಿಷಗಳ ವಿಡಿಯೋ ಕುರಿತು ಎನ್ಐಎ ಹೈಅಲರ್ಟ್ ಆಗಿರುವುದಾಗಿ ತಿಳಿದು ಬಂದಿದೆ.
ವಿಡಿಯೋದಲ್ಲಿ ‘ಫಿದಾಯೀನ್ ಯುದ್ಧ’ ಸಾರಿರುವ ಘೋರಿ ಹಿಂದು ಮುಖಂಡರ ಮತ್ತು ಪೊಲೀಸರ ವಿರುದ್ಧ ಆತ್ಮಹುತಿ ದಾಳಿ ನಡೆಸುವ ಬೆದರಿಕೆ ಒಡ್ಡಿದ್ದಾನೆ. ಇತ್ತೀಚೆಗೆ ವಂದೇ ಭಾರತ್ ರೈಲು ಹಳಿತಪ್ಪಿಸುವ ಉದ್ದೇಶದಿಂದ ಆ.23 ಮತ್ತು 24ರಂದು ರೈಲು ಹಳಿಯ ಮೇಲೆ ಸಿಮೆಂಟ್ ಬ್ಲಾಕ್ ಇರಿಸಿದ್ದು ಬೆಳಕಿಗೆ ಬಂದಿತ್ತು.
ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದು ಕರೆಯುವ ಫರ್ಹತುಲ್ಲಾ ಘೊರಿ, 2002ರಲ್ಲಿ ಗುಜರಾತ್ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಜತೆಗೆ 2005ರಲ್ಲಿ ಹೈದರಾಬಾದ್ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡ ಇರುವುದು ದೃಢಪಟ್ಟಿತ್ತು.