ಶಿಮ್ಲಾ: ಪ್ರವಾಹ ಮತ್ತು ಭೂಕುಸಿತಗಳಿಂದ ಉಂಟಾದ ಹಾನಿಯನ್ನು ಪರಿಶೀಲಿಸುವ ಸಲುವಾಗಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಕಾಂಗ್ರಾ ಜಿಲ್ಲೆಯ ಗಗ್ಗಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯನ್ನು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ಅಧಿಕಾರಿಗಳು ಬರಮಾಡಿಕೊಂಡರು.
ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಪ್ರಧಾನಿ ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಮನೆಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಆಗಿರುವ ವ್ಯಾಪಕ ಹಾನಿಯನ್ನು ಅವಲೋಕಿಸಿದರು. ಬಳಿಕ ಪ್ರವಾಹದಿಂದ ಹಾನಿಗೊಳಗಾದ ನಿವಾಸಿಗಳೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ತಮ್ಮ ಭೇಟಿಯ ಸಮಯದಲ್ಲಿ ಮೋದಿ ರಾಜ್ಯಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿಯನ್ನು ಭೇಟಿಯಾದರು.

