ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿದಿರುವ ಘಟನೆ ನಗರದ ಚೆನ್ನಮ್ಮ ವೃತ್ತದ ಬಳಿ ನಡೆದಿದೆ. ಗಾಯಾಳುಗಳನ್ನು ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ್, ದರ್ಶನ್ ಪಾಟೀಲ್ ಮತ್ತು ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಂಗಳವಾರ ತಡರಾತ್ರಿ(ಸೆ17) ರಾಣಿ ಚನ್ನಮ್ಮವೃತ್ತದಲ್ಲಿ ಭಾರೀ ಜನಸಂದಣಿಯಲ್ಲಿ ಡಾನ್ಸ್ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕ್ಷುಲ್ಲಕ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಯುವಕರ ಮಧ್ಯೆ ದಾಂಧಲೆ ಆಗಿದ್ದು, ಮೂವರು ಯುವಕರ ಮೇಲೆ ಚಾಕು ಇರಿತ ನಡೆಸಲಾಗಿದೆ.ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರಿಂದ ತೀವ್ರ ಅಸ್ವಸ್ಥರಾದ ಯುವಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ. ಪ್ರವೀಣ್ ಗುಂಡ್ಯಾಗೋಳ್ ಎಂಬವರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಳಗಾವಿಯ ಚರ್ಚ್ ಗಲ್ಲಿಯ ಯುವಕರ ಗ್ಯಾಂಗ್ನಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಮೆರವಣಿಗೆಯಲ್ಲಿ ಡಿ.ಜೆ ಸದ್ದಿಗೆ ಕುಣಿಯುತ್ತಿದ್ದ ವಿದ್ಯಾರ್ಥಿಗಳಿಗೆ ಮನಬಂದಂತೆ ಚಾಕು ಇರಿದ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾರೆ.
ಬೈಕ್ನಲ್ಲಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಕಂಡ ಎಪಿಎಂಸಿ ಠಾಣೆ ಪೊಲೀಸರು ಕೂಡಲೇ ಬೆನ್ನತ್ತಿ ಕ್ಷಣಮಾತ್ರದಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಈ ದುಷ್ಕೃತ್ಯ ಎಸೆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ಭಾಗಿಯಾದ ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಘಟನೆ ಸಂಬಂಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

