ಬೆಂಗಳೂರು, ಜ.02: 70ನೇ ವಯಸ್ಸಿನಲ್ಲೂ ಬೆಂಗಳೂರಿನಿಂದ ಸುಮಾರು 655 ಕಿ.ಮೀ. ದೂರದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ನಡೆಸಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಗುರುವಾರ (ಜ.01) ದೂರವಾಣಿ ಮೂಲಕ ಸುರೇಶ್‌ಕುಮಾರ್ ಅವರನ್ನು ಸಂಪರ್ಕಿಸಿದ ಪ್ರಧಾನಿ ಮೋದಿ, ಸೈಕಲ್ ಯಾತ್ರೆಯ ಅನುಭವ ಕುರಿತು ಮಾಹಿತಿ ಪಡೆದು ಅಭಿನಂದನೆ ಸಲ್ಲಿಸಿದರು. ಈ ಕುರಿತು ಸುರೇಶ್‌ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಅತ್ಯಂತ ಸಂತಸದ ಸಂಗತಿ. ಪ್ರಧಾನಿ ಮೋದಿ ಅವರು ಖುದ್ದು ಫೋನ್ ಮಾಡಿ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಕ್ಕಾಗಿ ನನ್ನನ್ನು ಅಭಿನಂದಿಸಿ ಪ್ರೇರಣೆ ನೀಡಿದರು” ಎಂದು ತಿಳಿಸಿದ್ದಾರೆ.
51 ವರ್ಷಗಳ ಬಳಿಕ ಸ್ನೇಹಿತರೊಂದಿಗೆ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಸೈಕಲ್ ಸವಾರಿ ಮಾಡಿರುವುದು ವಿಶೇಷ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. 2025ರಲ್ಲಿ ತಮ್ಮ ತಂಡ ಒಟ್ಟು 8,000 ಕಿ.ಮೀ. ದೂರ ಸೈಕ್ಲಿಂಗ್ ಮಾಡಿರುವ ವಿಷಯ ತಿಳಿದು ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದರು.
ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರವೂ ಇಂತಹ ಸಾಹಸ ಕೈಗೊಂಡಿರುವುದಕ್ಕೆ ಪ್ರಧಾನಿಗಳು ತಮ್ಮ ಬೆನ್ನು ತಟ್ಟಿದ್ದು, ಅದನ್ನು ತಾವು ಪಡೆದ ಮಹಾ ಸುಕೃತವೆಂದು ಸುರೇಶ್‌ಕುಮಾರ್ ಹೇಳಿದ್ದಾರೆ.

