ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇವಲ ಭಾರತ ಮಾತ್ರವಲ್ಲದೆ ವಿಶ್ವ ಮನ್ನಣೆ ಪಡೆದ ನಾಯಕ. ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಆತ್ಮಚರಿತ್ರೆ “ಐ ಆಮ್ ಜಾರ್ಜಿಯಾ – ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್” ಯ ಭಾರತದ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ.ಇದಕ್ಕೆ ‘Her Mann Ki Baat’ ಅಂದ್ರೆ‘ಆಕೆಯ ಮನಸ್ಸಿನ ಮಾತು’ ಎಂದು ಮೋದಿ ಶೀರ್ಷಿಕೆ ನೀಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಪರಸ್ಪರ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.ಇದೀಗ ಜಾರ್ಜಿಯಾ ಮೆಲೋನಿ ಅವರ ಆತ್ಮಕತೆಗೆ ಪ್ರಧಾನಿ ಮೋದಿ ಮುನ್ನುಡಿ ಬರೆಯುವ ಮೂಲಕ ಈ ಇಬ್ಬರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ.
ಪ್ರಧಾನಿ ಮೋದಿ ಈ ಮುನ್ನುಡಿಯಲ್ಲಿ ಮೆಲೋನಿಯವರ ಈ ಪುಸ್ತಕವನ್ನು ಪರಿಚಯಿಸುತ್ತಾ ಮೆಲೋನಿಯನ್ನು ದೇಶಭಕ್ತೆ, ತಮ್ಮ ಸಮಕಾಲೀನ ನಾಯಕಿ ಎಂದು ಬಣ್ಣಿಸಿದ್ದಾರೆ. ರಾಜಕೀಯ, ಅಧಿಕಾರದ ಹೊರತಾಗಿ ಅವರ ಧೈರ್ಯ, ದೃಢನಿಶ್ಚಯ ಮತ್ತು ಸಾರ್ವಜನಿಕ ಸೇವೆ ಮತ್ತು ಇಟಲಿಯ ಜನರ ಬಗ್ಗೆ ಅವರಿಗಿರುವ ಬದ್ಧತೆ ಶ್ಲಾಘನೀಯ ಎಂದು ಮೋದಿ ಬಣ್ಣಿಸಿದ್ದಾರೆ.

