ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ್ದು, 35 ಯುವತಿಯರು ಸೇರಿದಂತೆ 115 ಜನರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ದೇವಿಗೆರೆ ಕ್ರಾಸ್ ಬಳಿ ಇರುವ ಅಯಾನಾ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.ಬೆಂಗಳೂರು ದಕ್ಷಿಣ ಎಸ್ ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ 35 ಯುವತಿಯರು ಸೇರಿದಂತೆ 115 ಜನರನ್ನು ವಶಕ್ಕೆ ಪಡೆಯಲಾಗಿದೆ. 115 ಜರಿಗೂ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ತಂಪಾದ ವಾತಾವರಣ ಹಾಗೂ ಉದ್ಯಾನಗಳಿಗೆ ಮಾತ್ರವಲ್ಲದೇ ಪ್ರತಿಭೆಗಳಿಗೂ ಹೆಸರುವಾಸಿಯಾಗಿದೆ. ವಿವಿಧ ರಾಜ್ಯಗಳಿಂದ ಉದ್ಯೋಗ ಅರಸಿ ನಗರಕ್ಕೆ ಲಕ್ಷಾಂತರ ಜನರು ವಲಸೆ ಬರುತ್ತಾರೆ. ಆದರೆ ನಗರದ ಸುತ್ತಮುತ್ತ ಪಾರ್ಟಿಗಳ ಹೆಸರಿನಲ್ಲಿ ಬೆಂಗಳೂರಿನ ಘನತೆಗೆ ಮಸಿ ಬಳಿಯಲಾಗುತ್ತಿದೆ.
2019ರಲ್ಲಿ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, 10 ಜನರನ್ನು ವಶಕ್ಕೆ ಪಡೆದಿದ್ದರು. ಗ್ರಾಮದ ವೆಂಕಟೇಶ್ ಎಂಬುವರ ಜಮೀನಿನಲ್ಲಿ ಅಬ್ಬರದ ರೇವ್ ಪಾರ್ಟಿಯಲ್ಲಿ ಸುಮಾರು 500 500 ಜನರು ಪಾಲ್ಗೊಂಡಿದ್ದರು. ಕೇರಳ, ತಮಿಳುನಾಡು ಹಾಗೂ ಬೆಂಗಳೂರಿನ ಯುವಕ ಮತ್ತು ಯುವತಿಯರು ಸೇರಿ ಪಾರ್ಟಿ ಮಾಡುತ್ತಿದ್ದರು.ತಡರಾತ್ರಿ ಡಿಜೆ ಸೌಂಡ್ ಕೇಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಮೇಲೂ ಇತ್ತೀಚೆಗೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಓರ್ವ ಚೀನೀ ಮಹಿಳೆ ಸೇರಿದಂತೆ 31 ಮಂದಿಯನ್ನು ಬಂಧಿಸಲಾಗಿತ್ತು. ಪಾರ್ಟಿಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು.

