ಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೋರೇಟರ್ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾದ ಬಿಜೆಪಿ ಕಾರ್ಯಕರ್ತೆಯನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಗಂಭೀರ ಆರೋಪ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಪೊಲೀಸ್ ವ್ಯಾನ್‌ನಲ್ಲಿದ್ದ ಸಂತ್ರಸ್ತೆಯ ಸಂಬಂಧಿಕರು ಮೊಬೈಲ್‌ನಲ್ಲಿ ವೀಡಿಯೋ ದಾಖಲಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಕಾರ್ಯಕರ್ತೆ ಸುಜಾತಾ ಅಲಿಯಾಸ್ ವಿಜಯಲಕ್ಷ್ಮಿ ಹಂಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲೇ ಇತ್ತೀಚೆಗೆ ಗಲಾಟೆ ನಡೆದಿತ್ತು. ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಕೇಶ್ವಾಪುರ ರಾಣಾ ವ್ಯಾಪ್ತಿಯಲ್ಲಿ ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಿಕ್ಕಾಟ ಉಂಟಾಗಿತ್ತು. ಈ ವೇಳೆ ಅಧಿಕಾರಿಗಳೊಂದಿಗೆ ತೆರಳಿದ್ದ ಸುಜಾತಾ ಹಂಡಿ ಗಲಾಟೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಹಳೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣ ಕಲ್ಲಕುಂಟ್ಲಾ ಸುಜಾತಾ ಹಂಡಿ ವಿರುದ್ಧ ದೂರು ದಾಖಲಿಸಿದ್ದರು. ಗಲಾಟೆ ಸಂದರ್ಭದಲ್ಲಿ ಪರಸ್ಪರ ದೂರು–ಪ್ರತಿದೂರು ದಾಖಲಾಗಿದ್ದು, ಕಾಂಗ್ರೆಸ್ ಕಾರ್ಪೋರೇಟರ್ ನೀಡಿದ ದೂರಿನ ಮೇರೆಗೆ ಪೊಲೀಸರು ಸುಜಾತಾ ಹಂಡಿಯನ್ನು ಬಂಧಿಸಿದ್ದಾರೆ. ಬಂಧನ ವೇಳೆ ಪ್ರತಿರೋಧ ತೋರಿದ ಕಾರಣ ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಜೆಪಿ ಕಾರ್ಯಕರ್ತೆಯ ವಿರುದ್ಧ ಐಪಿಸಿ 307 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
SIR–BLOಗಳನ್ನು ಕರೆತಂದು ನಕಲಿ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂಬ ಆರೋಪವೇ ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರು, “ಆಕೆಯೇ ಸ್ವತಃ ತಮ್ಮ ಬಟ್ಟೆಗಳನ್ನು ಹರಿದುಕೊಂಡು ನಗ್ನಳಾಗಿದ್ದಾಳೆ. ನಮ್ಮ ಪೊಲೀಸರು ಇಂತಹ ಕೃತ್ಯ ಎಸಗಿಲ್ಲ” ಎಂದು ಹೇಳಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸುಜಾತಾ ಹಂಡಿ ವಿರುದ್ಧ ಬೇರೆ ಬೇರೆ ಆರೋಪಗಳಡಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ರಾಜಕೀಯ ವೈಷಮ್ಯದ ಕಾರಣದಿಂದಲೇ ಸುಜಾತಾಳ ಮೇಲೆ ಈ ರೀತಿಯ ಹಲ್ಲೆ ನಡೆದಿದೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

