ವ್ಯಾಟಿಕನ್ಸಿಟಿ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ (88) ಅವರು ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸೋಮವಾರ ಘೋಷಿಸಿದೆ.ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಕಾರ್ಡಿನಲ್ ಕೆವಿನ್ ಫಾರೆಲ್ ಅವರು, “ಆತ್ಮೀಯ ಸಹೋದರ, ಸಹೋದರಿಯರೇ, ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ ಎಂಬುದನ್ನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ. ಇಂದು (ಸೋಮವಾರ) ಬೆಳಿಗ್ಗೆ 7.35 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಪ್ರಪಂಚದಾದ್ಯಂತ ಕೋಟ್ಯಂತರ ಕ್ಯಾಥೋಲಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಪೋಪ್ ಫ್ರಾನ್ಸಿಸ್ ಕಳೆದೊಂದು ವಾರದಿಂದ ಶ್ವಾಸಕೋಶ ಸಂಬಂಧಿತ ಸೋಂಕಿನಿಂದ ಬಳಲುತ್ತಿದ್ದರು. ಫೆಬ್ರವರಿ 14 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಅವರು ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಕಳೆದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಪೋಪ್ ಅವರನ್ನು ನೋಡಿಕೊಳ್ಳುವ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಸೆರ್ಗಿಯೊ ಅಲ್ಫಿಯೇರಿ, ಅವರಿಗೆ ಔಷಧಿಗಳನ್ನು ಮುಂದುವರೆಸಲಾಗುತ್ತದೆ ಎಂದು ಹೇಳಿದ್ದರು.
ಪೋಪ್ ಫ್ರಾನ್ಸಿಸ್ ಚಿಕ್ಕವರಿದ್ದಾಗ ಕಂಡುಬಂದ ಸೋಂಕಿನಿಂದಾಗಿ ಅವರ ಶ್ವಾಸಕೋಶವೊಂದನ್ನು ತೆಗೆದುಹಾಕಬೇಕಾಯಿತು. ಇದರಿಂದಾಗಿ ಅವರು ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿದ್ದರು. 2023 ರಲ್ಲಿಯೂ ಸಹ, ಶ್ವಾಸಕೋಶದ ಸೋಂಕಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ವಾರ ಸೇಂಟ್ ಪೀಟರ್ಸ್ ಚೌಕ್ನಲ್ಲಿ ಕ್ಯಾಥೋಲಿಕ್ ಚರ್ಚ್ನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನಾರೋಗ್ಯದ ಕಾರಣ ಪೋಪ್ ಫ್ರಾನ್ಸಿಸ್ ಅವರಿಗೆ ಸಾಧ್ಯವಾಗಿರಲಿಲ್ಲ. ನಿಗದಿಯಾಗಿದ್ದ ಅನೇಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿತ್ತು.
ಭಾರತಕ್ಕೆ ಭೇಟಿ ನೀಡಬೇಕಿದ್ದ ಪೋಪ್ :
ಪೋಪ್ ಫ್ರಾನ್ಸಿಸ್ ಭಾರತಕ್ಕೆ ಭೇಟಿ ನೀಡಲಿದ್ದರು. ಕಳೆದ ವರ್ಷ ಡಿಸೆಂಬರ್ನಲ್ಲಿ, ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪೋಪ್ ಫ್ರಾನ್ಸಿಸ್ 2025 ರ ನಂತರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಕ್ಯಾಥೋಲಿಕ್ ಚರ್ಚ್ 2025 ಅನ್ನು ಜುಬಿಲಿ ವರ್ಷವೆಂದು ಘೋಷಿಸಿದೆ. ಭಾರತವು ಈಗಾಗಲೇ ಪೋಪ್ ಫ್ರಾನ್ಸಿಸ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅವರನ್ನು ನೇರವಾಗಿ ಆಹ್ವಾನಿಸಿದ್ದಾರೆ. ಪೋಪ್ ಅವರ ಆರೋಗ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ಪ್ರವಾಸವನ್ನು ನಿಗದಿಪಡಿಸಲಾಗಿತ್ತು.
16ನೇ ಬೆನೆಡಿಕ್ಟ್ ಅವರ ರಾಜೀನಾಮೆ ಬಳಿಕ ಪೋಪ್ ಫ್ರಾನ್ಸಿಸ್ ಅವರು 2013ರಲ್ಲಿ ರೋಮ್ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥರಾಗಿದ್ದರು. ಇದೀಗ, ಅವರ ಅಗಲಿಕೆಯಿಂದ ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯವಾಗಿ ಮರಣದ 15ರಿಂದ 20 ದಿನಗಳ ನಡುವೆ ಹೊಸ ಪೋಪ್ ಆಯ್ಕೆ ನಡೆಯುತ್ತದೆ.