ಕೇರಳ, ಏ.17: ಬಹುಭಾಷಾ ನಟ Prakash Raj ಅವರು ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ನೇರ ಮಾತುಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ನೀಡಿದ ಭಾಷಣದಿಂದ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಉತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ, ರಾಮಾಯಣದ ಕಥೆಯನ್ನು ವಿಭಿನ್ನ ರೀತಿಯಲ್ಲಿ ವಿವರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಹೇಳಿಕೆಯಲ್ಲಿ ರಾಮ ಉತ್ತರ ಭಾರತದವನು, ರಾವಣ ದಕ್ಷಿಣ ಭಾರತದ ಆದಿವಾಸಿ ಎಂದು ಹೇಳಿದ ಅವರು, ಹಣ್ಣು ತಿನ್ನುವ ಘಟನೆಯನ್ನೇ ರಾಮ-ರಾವಣ ನಡುವಿನ ಸಂಘರ್ಷಕ್ಕೆ ಕಾರಣ ಎಂದು ವಿವರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಭಾಷಣದ ವೇಳೆ ರಾಮ, ಲಕ್ಷ್ಮಣ ಮತ್ತು ಸೀತೆಯರು ದಕ್ಷಿಣ ಭಾರತಕ್ಕೆ ಬಂದು ಹಣ್ಣಿನ ತೋಟದಲ್ಲಿ ಹಣ್ಣು ತಿನ್ನುವ ಘಟನೆ, ನಂತರ ಶೂರ್ಪಣಖ ಮತ್ತು ರಾವಣ ನಡುವಿನ ಸಂಭಾಷಣೆಗಳನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದರು. ಈ ಹೇಳಿಕೆಗಳ ನಡುವೆ ‘ಹಿಂದಿ ಹೇರಿಕೆ ಮಾಡಬೇಡಿ, ಸ್ಥಳೀಯ ಭಾಷೆ ಕಲಿಯಿರಿ’ ಎಂಬ ಸಂದೇಶವನ್ನೂ ಅವರು ನೀಡಿದರು. ಜೊತೆಗೆ ‘ಡಿಸ್ಕೌಂಟ್’ ಉದಾಹರಣೆ ಮೂಲಕ ಕೇಂದ್ರ-ರಾಜ್ಯ ಸಂಬಂಧಗಳ ಬಗ್ಗೆ ಟೀಕೆ ಮಾಡಿದರು.
ಈ ಹೇಳಿಕೆಗಳು ಕೆಲವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಪ್ರಕರಣದ ಅಧಿಕೃತ ವಿವರಗಳ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಪ್ರಕಾಶ್ ರಾಜ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

