ಬೆಂಗಳೂರು : ಕಿತ್ತೂರು ಕರ್ನಾಟಕ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಮತ್ತು ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಮಾಡುವ ಹಳದಿ ಮೆಟ್ರೋ ರೈಲು ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದರು.
11 ಗಂಟೆಗೆ ಸರಿಯಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಾರದ 6 ದಿನ ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದೇ ಸಂದರ್ಭದಲ್ಲಿ ವರ್ಚುಯಲ್ ಮೂಲಕ ಅಮೃತ್‌ಸರ-ಶ್ರೀಮಾತಾ ವೈಷ್ಣೋದೇವಿ ಕತ್ರಿ, ಅಜಿ-ನಾಗ್ಪುರ-ಪುಣೆ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್‌ಗೂ ಚಾಲನೆ ನೀಡಿದರು. ನಂತರ ಬಹು ನಿರೀಕ್ಷಿತ 19.05 ಕಿ.ಮೀ. ಉದ್ದದ ಆರ್ ವಿ ರಸ್ತೆ-ಬೊಮಸಂದ್ರವರೆಗೆ ಸಂಚರಿಸುವ ಹಳದಿ ಮೆಟ್ರೋ ರೈಲಿಗೆ ಚಾಲನೆ ಕೊಟ್ಟರು.

ಮೆಟ್ರೋ ರೈಲು ಉದ್ಘಾಟನೆಯಾದ ನಂತರ ಸ್ವತಃ ಮೋದಿಯವರೇ ಜಯನಗರದ ರಾಗಿಗುಡ್ಡದಿಂದ ಎಲೆಕ್ಟ್ರಾನ್ ಸಿಟಿವರೆಗಿನ ಮೆಟ್ರೋ ರೈಲು ಮಾರ್ಗದಲ್ಲಿ ಪ್ರಯಾಣಿಸಿದರು. ಬಳಿಕ ಮೂರನೇ ಹಂತದ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಎಚ್.ಡಿ.ಕುಮಾರಸ್ವಾಮಿ, ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಭೈರತಿ ಸುರೇಶ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ತೇಜಸ್ವಿ ಸೂರ್ಯ ವೇದಿಕೆಯಲ್ಲಿದ್ದರು.

