ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (RSS) ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ಕರ್ನಾಟಕ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಸತೊಂದು ವಾಕ್ಸಮರಕ್ಕೆ ಕಾರಣವಾಗಿದೆ.
ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರ್ ಎಸ್ಎಸ್ ಅನ್ನು ಅಥವಾ ಆರ್ ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸುವ ತಾಕತ್ತು ಪ್ರಿಯಾಂಕ್ ಖರ್ಗೆಯವರಿಗೆ ಇಲ್ಲ ಎಂದಿದ್ದಾರೆ.
ಇದರ ನಡುವೆಯೇ, ರಾಜ್ಯ ಬಿಜೆಪಿಯು ತನ್ನ ಫೇಸ್ ಬುಕ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದೆ. ಅದು, 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ ಆರ್.ಎಸ್.ಎಸ್. ಶಿಬಿರಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದಾಗ, ಆ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಗೃಹ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರವಾಸೋದ್ಯಮ ಸಚಿವ ರೋಷನ್ ಬೇಗ್, ಅಲ್ಲಿದ್ದ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಬೆಂಗಳೂರಿನ ಆಗಿನ ಪೊಲೀಸ್ ಕಮೀಷನರ್ ಎಚ್.ಟಿ. ಸಾಂಗ್ಲಿಯಾನ ಕೂಡ ಹಾಜರಿದ್ದರು.
ಆ ಫೋಟೋ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಅದನ್ನು ರಾಜ್ಯ ಬಿಜೆಪಿ ತನ್ನ ಫೇಸ್ ಬುಕ್ ಪುಟದಲ್ಲಿ ಅ. 12ರಂದು ಪ್ರಕಟಿಸಿದೆ. ಈ ಮೂಲಕ ಪ್ರಿಯಾಂಕ್ ಖರ್ಗೆಯವರಿಗೆ ಟಾಂಗ್ ನೀಡಿರುವ ಬಿಜೆಪಿ, ಇಲ್ಲೊಮ್ಮೆ ನೋಡಿ ಪ್ರಿಯಾಂಕ್ ಖರ್ಗೆ! ಇಂದು ನೀವು ಆರೆಸ್ಸೆಸ್ ವಿರುದ್ಧ ವಿಷ ಕಾರುತ್ತಾ ಸಂಘದ ಚಟುವಟಿಕೆ ನಿಷೇಧಿಸಬೇಕು ಎಂದು ಹೇಳುತ್ತಿದ್ದೀರ.
ಆದರೆ, 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ, ಅಂದು ಗೃಹಸಚಿವರಾಗಿದ್ದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ ನೀಡಿ, ಆರೆಸ್ಸೆಸ್‌ನ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡು, ಪೂರ್ಣ ಸಹಕಾರ ನೀಡಿದ್ದರು ಎಂಬುದನ್ನು ಮರೆತಿದ್ದೀರಾ? ನೀವು ಇಂದು ಹೈಕಮಾಂಡ್ ಮೆಚ್ಚಿಸಲು ನಾಟಕವಾಡುತ್ತಿದ್ದೀರಾ? ಮೊದಲು ಮನೆಯ ಇತಿಹಾಸ ತಿಳಿದು ನಂತರ ರಾಷ್ಟ್ರಸೇವಕರ ಬಗ್ಗೆ ಮಾತನಾಡಿ ಎಂದು ಹೇಳಿದೆ.

