ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ತುರ್ತಾಗಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಏಕತೆ ಮತ್ತು ಒಗ್ಗಟ್ಟು ಅತ್ಯಗತ್ಯವಾದ ಈ ಕ್ಷಣದಲ್ಲಿ, ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯುವುದು ಮುಖ್ಯ ಎಂದು ವಿರೋಧ ಪಕ್ಷಗಳು ನಂಬುತ್ತವೆ ಎಂದು ಖರ್ಗೆ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
2025, ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ಎದುರಿಸುವ ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಇಚ್ಛಾಶಕ್ತಿಯ ಪ್ರಬಲ ಪ್ರದರ್ಶನವಾಗಲಿದೆ. ಹೀಗಾಗಿ ಅಧಿವೇಶನವನ್ನು ಅದಕ್ಕೆ ತಕ್ಕಂತೆ ಕರೆಯಬೇಕಿದೆ ಎಂದು ನಾವು ಭಾವಿಸುತ್ತೇವೆ ಎಂದು ಖರ್ಗೆ ಅವರು ಹೇಳಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯನ್ನು ಇಡೀ ಜಗತ್ತು ಖಂಡಿಸಿದೆ. ಏಪ್ರಿಲ್ 22ರಂದು ನಡೆದ ಈ ಕೃತ್ಯದಲ್ಲಿ 26 ಪ್ರವಾಸಿಗರು ಮೃತಪಟ್ಟರು. ಇದರಲ್ಲಿ ಪಾಕಿಸ್ತಾನ ಕೈವಾಡ ಇರುವುದರಿಂದ ಭಾರತ, ಪಾಕ್ ವಿರುದ್ಧ ಆಕ್ರೋಶ ಹೊರಹಾಕಿದೆ. ಅಲ್ಲದೆ, ರಾಜತಾಂತ್ರಿಕವಾಗಿ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಇತ್ತ ಪಾಕ್ ಕೂಡ ಭಾರತದ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ. ಉಭಯ ದೇಶಗಳ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಭೀತಿ ಆವರಿಸಿದೆ. ಈ ಸಂದರ್ಭದಲ್ಲಿ ಏಕತೆಯನ್ನು ಪ್ರದರ್ಶಿಸಬೇಕಾಗಿರುವುದರಿಂದ ತುರ್ತು ಅಧಿವೇಶನ ಕರೆಯಲು ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

