ಬೆಂಗಳೂರು/ಮೈಸೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕೆಲ ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಸದ್ಯಕ್ಕೆ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೇ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ‘ಸಂಕ್ರಾಂತಿ ಕ್ರಾಂತಿ’ ನಡೆಯಲಿದೆ ಎಂಬ ಊಹಾಪೋಹಗಳಿಗೆ ಈಗ ಫುಲ್ ಸೈಲೆಂಟ್ ಬೀಳಿಸಿದೆ.
ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಮೈಸೂರು ರನ್‌ವೇನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸೀಕ್ರೆಟ್ ಮೀಟಿಂಗ್ ನಡೆದಿದ್ದು, ಬಳಿಕ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ರಾಹುಲ್ ಗಾಂಧಿ ಜೊತೆ ರಹಸ್ಯ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಯಕತ್ವ ಗೊಂದಲಕ್ಕೆ ಶಾಶ್ವತ ತೆರೆ ಎಳೆಯುವಂತೆ ರಾಹುಲ್ ಗಾಂಧಿ ಬಳಿ ಮನವಿ ಮಾಡಿದ್ದಾರೆ. ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಸ್ತಾಂತರದ ಕುರಿತು ಸ್ಪಷ್ಟತೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇಬ್ಬರು ನಾಯಕರಿಗೂ “ದೆಹಲಿಗೆ ಬನ್ನಿ, ಕೂತು ಮಾತಾಡೋಣ” ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಜನವರಿ 18ರ ಒಳಗೆ ಅಥವಾ 24ರ ನಂತರ ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿರುವ ರಾಹುಲ್, “ನಿಮ್ಮ ಸಮಸ್ಯೆಗಳಿಗೆ ದೆಹಲಿಯಲ್ಲೇ ಪರಿಹಾರ ನೀಡಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ರಾಜ್ಯ ಕಾಂಗ್ರೆಸ್ ನಾಯಕತ್ವ ಗೊಂದಲ ವಿಚಾರ ಮತ್ತಷ್ಟು ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ದಿನಗಳಲ್ಲಿ ದೆಹಲಿ ಮಾತುಕತೆಗಳು ಯಾವ ದಿಕ್ಕು ತಾಳುತ್ತವೆ ಎಂಬುದನ್ನು ರಾಜಕೀಯ ವಲಯ ಆತುರದಿಂದ ಕಾಯುತ್ತಿದೆ.

