ನವದೆಹಲಿ : ಔರಂಗಜೇಬ್ ಅಥವಾ ಬಾಬರ್ ಅವರನ್ನು ವೈಭವೀಕರಿಸುವವರು ದೇಶದ ಮುಸ್ಲಿಮರನ್ನು ಅವಮಾನಿಸಿದಂತೆ ಎಂದಿದ್ದಾರೆ. ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರೀಯ ವೀರರು. ಅವರು ನಮ್ಮ ದೇಶದ ಹೀರೋಗಳೇ ವಿನಃ ಮೊಘಲ್ ಚಕ್ರವರ್ತಿ ಔರಂಗಜೇಬನಲ್ಲ ಎಂದು ಹೇಳಿದ್ದಾರೆ.
“ಮಹಾರಾಣಾ ಪ್ರತಾಪ್ ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಣಾ ಪ್ರತಾಪ್ ಅವರಿಂದ ಸ್ಫೂರ್ತಿ ಪಡೆದರು. ವಿಶೇಷವಾಗಿ ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ಅವರು ಸ್ಫೂರ್ತಿ ಪಡೆದಿದ್ದರು. ಸ್ವಾತಂತ್ರ್ಯಾನಂತರದ ಎಡಪಂಥೀಯ ಒಲವನ್ನು ಹೊಂದಿರುವ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ. ಆದರೆ ಔರಂಗಜೇಬನನ್ನು ಶ್ಲಾಘಿಸಿದರು” ಎಂದು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.
“ಮಹಾರಾಣಾ ಪ್ರತಾಪ್ ತನ್ನ ಸ್ವಾಭಿಮಾನವನ್ನು ಎತ್ತಿಹಿಡಿಯಲು ತನ್ನ ಪ್ರಾಣವನ್ನು ತ್ಯಾಗ ಮಾಡಿದನು. ನಮ್ಮ ಆದರ್ಶಗಳು ಇಸ್ಲಾಂ ವಿರೋಧಿ ಮತ್ತು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಹಕೀಮ್ ಖಾನ್ ಸೂರಿ ಮೊಘಲರ ವಿರುದ್ಧ ಹಲ್ದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ಜೊತೆ ಹೋರಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿಯೂ ಮುಸ್ಲಿಂ ಸಮುದಾಯದ ಜನರಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಅಂಗರಕ್ಷಕರಲ್ಲಿ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯೆಂದರೆ ಮದರಿ ಎಂಬ ಮುಸ್ಲಿಂ ಯುವಕ. ಅಂತಹ ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ನಾಯಕರು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಔರಂಗಜೇಬ್ ಒಬ್ಬ ಹೀರೋ ಎಂದು ಭಾವಿಸುವವರು ಮೊಘಲ್ ಚಕ್ರವರ್ತಿ ಒಬ್ಬ ಮತಾಂಧ, ಕ್ರೂರ ಆಡಳಿತಗಾರ ಎಂದು ಬರೆದ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಓದಬೇಕು ಎಂದು ಅವರು ಹೇಳಿದರು.ಅಂತಹ ವ್ಯಕ್ತಿಯು ಹೀರೋ ಆಗಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದರು.
ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ ಮತ್ತು ದೆಹಲಿಯ ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು. ಬಾಬರ್, ತೈಮೂರ್, ಔರಂಗಜೇಬ್, ಘೋರಿ, ಘಜ್ಜಿ ಅವರನ್ನು ವೈಭವೀಕರಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.