ನವದೆಹಲಿ : ಸತತ 11ನೇ ಬಾರಿ ರಿಪೋ ದರ ಯಥಾಸ್ಥಿತಿ ಮುಂದುವರಿಸಲು ಎಂಪಿಸಿ ನಿರ್ಧರಿಸಿದೆ. ಮೂರು ದಿನಗಳ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಇಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ರಿಪೋ ದರವನ್ನು ಸದ್ಯಕ್ಕೆ ಇಳಿಸದಿರುವ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. 2023ರ ಫೆಬ್ರುವರಿಯಲ್ಲಿ ರಿಪೋ ದರವನ್ನು ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ವ್ಯತ್ಯಯವಾಗದೇ ಅದೇ ದರದಲ್ಲಿ ಮುಂದುವರಿದಿದೆ. ಎಂಪಿಸಿ ಸಮಿತಿಯ ಆರು ಸದಸ್ಯರಲ್ಲಿ 4:2ರ ಬಹುಮತದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಿ ಈ ಬಾರಿಯೂ ಬಡ್ಡಿದರ ಇಳಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಬಡ್ಡಿದರ ಶೇ. 6.50ರಲ್ಲೇ ಇರಲಿದೆ.
ಈ ಹಣಕಾಸು ವರ್ಷದಲ್ಲಿ (2024-25) ಭಾರತದ ಜಿಡಿಪಿ ಶೇ. 6.6ರಷ್ಟಿರಬಹುದು ಎಂದು ಆರ್ಬಿಐ ನಿರೀಕ್ಷಿಸಿರುವುದನ್ನು ಶಕ್ತಿಕಾಂತ್ ದಾಸ್ ತಿಳಿಸಿದರು. ಹಿಂದಿನ ಎಂಪಿಸಿ ಸಭೆಯಲ್ಲಿ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 7.2ರಷ್ಟು ಹೆಚ್ಚಬಹುದು ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಅಂದಾಜನ್ನು ಪರಿಷ್ಕರಿಸಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಎರಡು ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 6.8 ಮತ್ತು ಶೇ. 7.2ರಷ್ಟು ಹೆಚ್ಚಬಹುದು ಎಂದು ಅವರು ಅಂದಾಜು ಮಾಡಿದರು.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಅಕ್ಟೋಬರ್ನಲ್ಲಿ ಹಣದುಬ್ಬರ ಏರಿರುವ ರೀತಿಗೆ ಆತಂಕ ವ್ಯಕ್ತಪಡಿಸಿದರು. ಕೋರ್ ಇನ್ಫ್ಲೇಶನ್ ಹೆಚ್ಚಿರುವುದು ಅವರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಈ ಬಾರಿ ಮುಂಗಾರು ಬೆಳೆಯ ಫಸಲು ಉತ್ತಮವಾಗಿದ್ದು ಆಹಾರ ಬೆಲೆಗಳು ಕಡಿಮೆ ಆಗಬಹುದು. ಇದರಿಂದ ಒಟ್ಟಾರೆ ಹಣದುಬ್ಬರ ಕಡಿಮೆ ಆಗಬಹುದು ಎಂಬುದು ಅವರ ಆಶಯ.
2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.8ರಷ್ಟಿರಬಹುದು ಎಂಬುದು ಎಂಪಿಸಿ ಮಾಡಿರುವ ಅಂದಾಜು. ಮುಂದಿನ ಹಣಕಾಸು ವರ್ಷವಾದ 2025-26ರ ಮೊದಲೆರಡು ಕ್ವಾರ್ಟರ್ಗಳಲ್ಲಿ ಹಣದುಬ್ಬರ ಶೇ. 4.6 ಮತ್ತು ಶೇ. 4ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.