ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಎ1, ಎ2, ಎ3 ಆರೋಪಿಗಳಾಗಿದ್ದಾರೆ. ಆದ್ದರಿಂದ ಎಲ್ಲರೂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂವೇದನೆ ಇದ್ದರೆ, ರಾಜ್ಯದ ಜನರ ಕ್ಷಮೆ ಕೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಮೂವರೂ ವಹಿಸಿಕೊಳ್ಳಬೇಕು. ಜೊತೆಗೆ ರಾಜೀನಾಮೆ ನೀಡಬೇಕು ಹಾಗೂ ಸಿಬಿಐ ತನಿಖೆ ನಡೆಯಬೇಕು. ಇನ್ನು ಮುಂದಾದರೂ ಇಂತಹ ಘಟನೆ ನಡೆಯದೇ ಇರಲು ನಿಯಮ ರೂಪಿಸಬೇಕು ಹಾಗೂ ಸದನ ಸಮಿತಿ ನೇಮಕ ಮಾಡಬೇಕು. ನೋವಿನಲ್ಲಿ ಕೈ ತೊಳೆಯುತ್ತಿರುವ ತಂದೆ ತಾಯಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಜೂನ್ 3 ರಂದು ಆರ್‌ಸಿಬಿ ಕ್ರಿಕೆಟ್ ತಂಡ ಗೆದ್ದ ನಂತರ ಇಡೀ ರಾಜ್ಯದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಹೊಸ ವರ್ಷದ ಆಚರಣೆಗಿಂತಲೂ ಹೆಚ್ಚಿನ ಆಚರಣೆ ಆಗ ನಡೆದಿತ್ತು. ಅಭಿಮಾನಿಗಳು ಬೀದಿಗಿಳಿದು ಕುಣಿದಾಡಿದ್ದರು. ಪೊಲೀಸರು ರಸ್ತೆಗಳಲ್ಲಿ ನಿಂತು ಜನದಟ್ಟಣೆ ನಿರ್ವಹಣೆ ಮಾಡಿದ್ದರು. ಮಧ್ಯರಾತ್ರಿ ಕಳೆದು ಮುಂಜಾನವೆರೆಗೆ ಸಂಭ್ರಮಾಚರಣೆ ನಡೆದು, ಪೊಲೀಸರಿಗೆ ಬಹಳ ಸುಸ್ತಾಗಿತ್ತು. ಇವೆಲ್ಲವೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಗೊತ್ತಿತ್ತು. ಈ ಸಂಭ್ರಮವನ್ನು ಕ್ರೆಡಿಟ್ ಆಗಿ ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಳ್ಳಲು ʻಕ್ರೆಡಿಟ್ ವಾರ್ʼ ನಡೆಯಿತು ಎಂದರು.
ಸಂಭ್ರಮಾಚರಣೆ ಸಂಬಂಧ ಕ್ರಿಕೆಟ್ ಅಸೋಸಿಯೇಶನ್‌ನಿಂದ ಪೊಲೀಸರಿಗೆ ಅನುಮತಿ ಕೇಳಿ ಪೊಲೀಸ್ ಆಯುಕ್ತರು, ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಪತ್ರ ಬರೆಯಲಾಗಿದೆ. ನಂತರ ಆಡಳಿತ ಮತ್ತು ಸಿಬ್ಬಂದಿ ತರಬೇತಿ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿ ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆ ಅಂದ್ರೆ ಅದಕ್ಕೆ ಬಹಳ ಸಿದ್ಧತೆ ಮಾಡುತ್ತಾರೆ. ಆದರೆ ಕೇವಲ 24 ಗಂಟೆಯಲ್ಲೇ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ.
ಇದೇ ವೇಳೆ ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಪರೇಡ್ ಬಗ್ಗೆ ಹಾಗೂ ವಿಧಾನಸೌಧದಲ್ಲಿನ ಆಚರಣೆ ಬಗ್ಗೆ ಮಾಹಿತಿ ಹಾಕಲಾಯಿತು. ಜೊತೆಗೆ ಸಿಎಂ ಕಚೇರಿಯಿಂದಲೇ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಲಾಗಿದೆ. ಇದು ಸರ್ಕಾರಿ ಆಚರಣೆಯಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರವೇ ತಮ್ಮನ್ನು ಆಹ್ವಾನಿಸಿದೆ ಎಂದು ಆರ್‌ಸಿಬಿ ಮತ್ತು ಕ್ರಿಕೆಟ್ ಅಸೋಸಿಯೇಶನ್ ಹೇಳಿದೆ. ಇದು ಕೋರ್ಟ್‌ಗೆ ನೀಡಿರುವ ಅಫಿಡವಿಟ್‌ನಲ್ಲೂ ಇದೆ ಎಂದು ವಿವರಿಸಿದರು.

